ʼಹೈಕೋರ್ಟ್ ಸಿಜೆ ಸಮಯಪಾಲನೆ ಮಾಡುತ್ತಿಲ್ಲʼ: ಸಿಜೆಐಗೆ ಪತ್ರ

ಸಾಂದರ್ಭಿಕ ಚಿತ್ರ
ಬೆಂಗಳೂರು: ‘ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರು ಕೆಲವು ತಿಂಗಳುಗಳಿಂದ ಸರಕಾರ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಗಳಾಗುತ್ತಿದೆ’ ಎಂದು ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ ಅವರು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಾಧೀಶರಿಗೆ ಪತ್ರವನ್ನು ಬರೆದಿದ್ದಾರೆ.
‘ಹೈಕೋರ್ಟ್ನ ಮುಖ್ಯ ನ್ಯಾಯಾಧೀಶರು ಪ್ರತಿನಿತ್ಯ ಕೋರ್ಟ್ ಆರಂಭವಾಗುವ ಸಮಯವಾದ ಬೆಳಗ್ಗೆ 10.30ಕ್ಕೆ ನ್ಯಾಯಾಲಯವನ್ನು ಆರಂಭಿಸುತ್ತಿಲ್ಲ. ಅಲ್ಲದೆ, ಸಂಜೆ 4.45ಕ್ಕಿಂತ ಮುಂಚೆಯೇ ಕೆಲಸದಿಂದ ಹೊರಡುತ್ತಾರೆ. ಮುಖ್ಯ ನ್ಯಾಯಾಧೀಶರ ಈ ನಡೆಯಿಂದ ನ್ಯಾಯಾಲಯದಲ್ಲಿ ದಾಖಲಾಗುವ ಮೊಕದ್ದಮೆಗಳ ವಿಲೇವಾರಿ ವಿಳಂಬವಾಗುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.
‘ಪಿಎಎಲ್, ಹಸಿರು ಪೀಠ, ಮೇಲ್ಮನವಿ(ರಿಟ್) ಇತ್ಯಾದಿಗಳಂತಹ ಪ್ರಮುಖ ವಿಚಾರಣೆಯನ್ನು ಹೊಂದಿರುವ ಪೀಠದ ಅಧ್ಯಕ್ಷತೆಯನ್ನು ಮುಖ್ಯ ನ್ಯಾಯಾಧೀಶರು ವಹಿಸಿರುತ್ತಾರೆ. ಆದರೆ, ಮುಖ್ಯ ನ್ಯಾಯಾಧೀಶರು ನಡೆಯಿಂದ ಈ ಅರ್ಜಿಗಳು ಸೂಕ್ತ ಸಮಯದಲ್ಲಿ ವಿಲೇವಾರಿ ಆಗುತ್ತಿಲ್ಲ. ಇದು ಈಗಾಗಲೇ ನ್ಯಾಯಾಲಯದ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ಕುಗ್ಗಿಸಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.