ರೈತರ 65 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದ ಮನಮೋಹನ್ ಸಿಂಗ್ : ಎಲ್.ಕೆ.ಅತೀಕ್
ಎಲ್.ಕೆ.ಅತೀಕ್
ಬೆಂಗಳೂರು : 2008ರಲ್ಲಿ ಕೃಷಿ ಸಾಲದ ಬಗ್ಗೆ ಚರ್ಚೆ ನಡೆದಿತ್ತು. ಚರ್ಚೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಸಾಲ ಮನ್ನಾ ಮಾಡಬಾರದು. ಒಂದು ವೇಳೆ ರೈತರ ಸಾಲ ಮನ್ನಾ ಮಾಡಿದರೆ, ಬ್ಯಾಂಕಿಂಗ್ ವ್ಯವಸ್ಥೆ ಹಾಳಾಗುತ್ತದೆ. ರೈತರು ಪದೇ ಪದೇ ಸಾಲ ಮಾಡುತ್ತಾರೆ ಎಂದು ಹೇಳಿದ್ದರು. ಆದರೆ ಅಂದಿನ ಪ್ರಧಾನಿಯಾಗಿದ್ದ ಡಾ.ಮನಮೋಹಾನ್ ಸಿಂಗ್ 65 ಸಾವಿರ ಕೋಟಿ ರೂ.ಗಳ ರೈತರ ಸಾಲವನ್ನು ಮನ್ನಾ ಮಾಡಿದರು ಎಂದು ಆರ್ಥಿಕ ಇಲಾಖೆ ಮತ್ತು ಮುಖ್ಯಮಂತ್ರಿಯ ಅಪರ ಕಾರ್ಯದರ್ಶಿ ಎಲ್.ಕೆ.ಅತೀಕ್ ಅವರು ತಿಳಿಸಿದರು.
ಶುಕ್ರವಾರ ಗಾಂಧಿ ಭವನದಲ್ಲಿ ಜಾಗೃತ ಕರ್ನಾಟಕವು ಆಯೋಜಿಸಿದ್ದ ‘ಡಾ.ಮನಮೋಹನ್ ಸಿಂಗ್ ಅವರ ನೀತಿಗಳು: ಭಾರತದ ವರ್ತಮಾನ ಹಾಗೂ ಭವಿಷ್ಯ’ ಸಂವಾದದಲ್ಲಿ ಮಾತನಾಡಿದ ಅವರು, ‘ಡಾ. ಮನಮೋಹನ್ ಸಿಂಗ್ರ ಹಲವು ಭಾಷಣಗಳನ್ನು ನಾನು ಬರೆಯುತ್ತಿದ್ದೆ. ಅಲ್ಪಸಂಖ್ಯಾತರ ಸಮಸ್ಯೆಗಳ ಬಗ್ಗೆ ನನ್ನ ಜೊತೆಗೆ ಅವರು ಚರ್ಚೆ ಮಾಡುತ್ತಿದ್ದರು. ಅವರು ತಜ್ಞರ ಮೇಲೆ ನಂಬಿಕೆಯನ್ನು ಇಟ್ಟಿದ್ದರು. ಡಾ. ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದಾಗ, ತಮ್ಮ ಕಾರ್ಯಾಲಯದ ಎಲ್ಲ ಅಧಿಕಾರಿಗಳಿಗೆ ಹಾಗೂ ಅವರ ಕುಟುಂಬಕ್ಕೆ ವರ್ಷಕ್ಕೆ ಎರಡು ಬಾರಿ ಔತಣಕೂಟವನ್ನು ಏರ್ಪಡಿಸುತ್ತಿದ್ದರುʼ ಎಂದರು.
ವ್ಯಾಪಾರದ ನೀತಿಗಳು ರೈತರ ವಿರುದ್ಧವೇ ಇರುತ್ತವೆ. ಹಾಗಾಗಿ ರೈತ ಸಾಲದ ಸುಳಿಗೆ ಸಿಲುಕುತ್ತಾನೆ. ಹಾಗಾಗಿ ಒಮ್ಮೊಮ್ಮೆ ರೈತರ ಸಾಲ ಮನ್ನಾ ಮಾಡುವುದು ಸಾಮಾಜಿಕವಾಗಿ ಮಾತ್ರವಲ್ಲ ಆರ್ಥಿಕವಾಗಿಯೂ ಅಗತ್ಯವಾಗುತ್ತದೆ ಎಂದು ಮನಮೋಹನ್ ಸಿಂಗ್ ಹೇಳಿದ್ದರು. ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸುವುದರ ಬಗ್ಗೆಯೂ ಅವರು ಕಾಳಜಿ ವಹಿಸಿದ್ದರು. ಮಹಾರಾಷ್ಟ್ರದ ವಿದರ್ಭ ಒಂದೇ ಪ್ರದೇಶದ ರೈತರಿಗೆ ಅವರು ಸುಮಾರು ಏಳು ಸಾವಿರ ಕೋಟಿ ರೂ.ನ ಪ್ಯಾಕೇಜ್ ಕೊಟ್ಟಿದ್ದರು ಎಂದು ಎಲ್.ಕೆ.ಅತೀಕ್ ವಿವರಿಸಿದರು.
ಉದಾರೀಕರಣ, ಖಾಸಗೀಕರಣ ಹಾಗು ಜಾಗತೀಕರಣದ ಆರ್ಥಿಕ ನೀತಿಯನ್ನು ಜಾರಿಗೆ ತಂದವರೇ ಪ್ರಧಾನಿಯಾಗಿ ಜನ ಕಲ್ಯಾಣದ ಹತ್ತಾರು ಮಹತ್ವದ ಯೋಜನೆಗಳನ್ನು ಜಾರಿಗೆ ತಂದರು. ಡಾ.ಮನಮೋಹನ್ ಸಿಂಗ್ ಅವಧಿಯಲ್ಲಿ ಹೊಸ ಐಐಟಿಗಳು ಆರಂಭವಾದವು. ವಾರ್ಷಿಕ ಬಜೆಟ್ನಲ್ಲಿ ಐಐಟಿಗಳ ನಿರ್ವಹಣೆಗಾಗಿ ಸುಮಾರು 100 ಕೋಟಿ ರೂ.ಗಳನ್ನು ಮೀಸಲಿಟ್ಟರು ಎಂದು ಅವರು ತಿಳಿಸಿದರು.