ಲೋಕಸಭಾ ಚುನಾವಣೆ | ಮಾ.28ಕ್ಕೆ ಅಧಿಸೂಚನೆ ಪ್ರಕಟ : ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ
Photo: PTI
ಬೆಂಗಳೂರು: ರಾಜ್ಯದಲ್ಲಿ ಬೇಸಿಗೆ ಬಿಸಿಲಿನ ಅಬ್ಬರದ ನಡುವೆಯೇ ಲೋಕಸಭಾ ಚುನಾವಣೆಯ ಕಾವು ತೀವ್ರವಾಗಿ ಏರತೊಡಗಿದೆ. ಮಾ.28ರಂದು ಚುನಾವಣಾ ಅಧಿಸೂಚನೆ ಹೊರಬೀಳಲಿದ್ದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ.
ಮೊದಲ ಹಂತದಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಿಗೆ ಎಪ್ರಿಲ್ 26ಕ್ಕೆ ಮತದಾನ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಎಪ್ರಿಲ್ 4 ಕೊನೆಯ ದಿನವಾಗಿದೆ. ನಾಮಪತ್ರ ಪರಿಶೀಲನೆ ಎಪ್ರಿಲ್ 5ಕ್ಕೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಎಪ್ರಿಲ್ 8 ಕೊನೆಯ ದಿನವಾಗಿದೆ.
ಹೀಗಾಗಿ ರಾಜ್ಯದ ಆಡಳಿತಾರೂಢ ಕಾಂಗ್ರೆಸ್, ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಸೇರಿದಂತೆ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಬಿರುಸುಗೊಂಡಿವೆ. ಕೆಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿರುವ ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನಾಯಕರು, ತಮ್ಮ ಅಭ್ಯರ್ಥಿಗಳ ಗೆಲುವಿಗೆ ರಣತಂತ್ರ ಹೆಣೆಯುವುದರಲ್ಲಿ ನಿರತರಾಗಿದ್ದಾರೆ.
ಮೊದಲ ಹಂತದಲ್ಲಿ ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ(ಎಸ್ಸಿ), ತುಮಕೂರು, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರ(ಎಸ್ಸಿ), ಬೆಂಗಳೂರು ಗ್ರಾಮಾಂತರ, ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಕ್ಷೇತ್ರಕ್ಕೆ ಎಪ್ರಿಲ್ 26ಕ್ಕೆ ಚುನಾವಣೆ ನಡೆಯಲಿದ್ದು, ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.