ಲೋಕಸಭಾ ಚುನಾವಣೆ | ಗುರುತಿನ ಚೀಟಿ ಇಲ್ಲದವರು ಪರ್ಯಾಯ ಗುರುತಿನ ದಾಖಲೆಯನ್ನು ಒದಗಿಸಬಹುದಾಗಿದೆ : ರಾಜ್ಯ ಮುಖ್ಯ ಚುನಾವಣಾಧಿಕಾರಿ
ಬೆಂಗಳೂರು: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮತದಾರರು ತಮ್ಮ ಮತಗಳನ್ನು ಚಲಾಯಿಸುವ ಮೊದಲು ಮತದಾನ ಕೇಂದ್ರಗಳಲ್ಲಿ ಅವರ ಗುರುತಿಗಾಗಿ ಮತದಾರರ ಗುರುತಿನ ಚೀಟಿಯನ್ನು ಹಾಜರುಪಡಿಸಬೇಕು. ಗುರುತಿನ ಚೀಟಿ ಇಲ್ಲದವರು ತಮ್ಮ ಭಾವಚಿತ್ರವಿರುವ ಪರ್ಯಾಯ ಗುರುತಿನ ದಾಖಲೆಯನ್ನು ಒದಗಿಸಬಹುದಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.
ಪರ್ಯಾಯ ದಾಖಲೆಗಳು: ಆಧಾರ್ ಕಾರ್ಡ್, ನರೇಗಾ ಜಾಬ್ ಕಾರ್ಡ್, ಬ್ಯಾಂಕ್/ಪೋಸ್ಟ್ ಆಫೀಸ್ ನೀಡಿದ ಭಾವಚಿತ್ರವಿರುವ ಪಾಸ್‍ಬುಕ್‍ಗಳು, ಕಾರ್ಮಿಕ ಸಚಿವಾಲಯದ ಯೋಜನೆಯಡಿಯಲ್ಲಿ ನೀಡಲಾದ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್, ಎನ್‍ಆರ್ ಪಿ ಅಡಿಯಲ್ಲಿ ಆರ್ ಜಿಐ ನೀಡಿದ ಸ್ಮಾರ್ಟ್ ಕಾರ್ಡ್, ಭಾರತೀಯ ಪಾಸ್‍ಪೋರ್ಟ್ ಅನ್ನು ತೋರಿಸಿ ಮತದಾನ ಮಾಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಭಾವಚಿತ್ರ ಹೊಂದಿರುವ ಪಿಂಚಣಿಯ ದಾಖಲೆ, ಕೇಂದ್ರ/ರಾಜ್ಯ ಸರಕಾರ/ಪಿಎಸ್‍ಯು/ಪಬ್ಲಿಕ್ ಲಿಮಿಟೆಡ್ ಕಂಪೆನಿಗಳು ಉದ್ಯೋಗಿಗಳಿಗೆ ನೀಡಿದ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು, ಸಂಸದರು/ಶಾಸಕರು/ವಿಧಾನಪರಿಷತ್ ಸದಸ್ಯರಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿಗಳು, ಭಾರತ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ನೀಡಿರುವ ವಿಶಿಷ್ಟ ಅಂಗವೈಕಲ್ಯ ಐಡಿ(ಯುಡಿಐಡಿ)ಕಾರ್ಡ್ ಅನ್ನು ತೋರಿಸಿ ಮತದಾನ ಮಾಡಬಹುದಾಗಿದೆ ಎಂದು ಮನೋಜ್ ಕುಮಾರ್ ಮೀನಾ ಹೇಳಿದ್ದಾರೆ.
205 ಎಫ್‍ಐಆರ್ ದಾಖಲು: ನಗದು, ಮದ್ಯ, ಡ್ರಗ್ಸ್, ಬೆಲೆಬಾಳುವ ಲೋಹ ಮತ್ತು ಉಚಿತ ಉಡುಗೊರೆ ವಶಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ 205 ಎಫ್‍ಐಆರ್ ಗಳನ್ನು ದಾಖಲಿಸಲಾಗಿದೆ. 47,868 ಶಸ್ತ್ರಾಸ್ತ್ರಗಳನ್ನು ಠೇವಣಿ ಮಾಡಲಾಗಿದೆ. 827 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 8 ಶಸ್ತ್ರಾಸ್ತ್ರಗಳ ಪರವಾನಗಿಯನ್ನು ರದ್ದುಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಿಆರ್ ಪಿಸಿಯ ತಡೆಗಟ್ಟುವ ವಿಭಾಗಗಳ ಅಡಿಯಲ್ಲಿ 2,173 ಪ್ರಕರಣಗಳನ್ನು ದಾಖಲಿಸಲಾಗಿದೆ. ಅಬಕಾರಿ ಇಲಾಖೆಯು ಘೋರ ಅಪರಾಧ ಅಡಿಯಲ್ಲಿ 249 ಪ್ರಕರಣಗಳನ್ನು ದಾಖಲಿಸಿದೆ. ಪರವಾನಗಿ ಉಲ್ಲಂಘನೆ ಅಡಿಯಲ್ಲಿ 206 ಪ್ರಕರಣ ದಾಖಲಿಸಿದೆ. ಎನ್‍ಡಿಪಿಎಸ್ ಅಡಿಯಲ್ಲಿ 13 ಪ್ರಕರಣಗಳನ್ನು ಮತ್ತು ಕರ್ನಾಟಕ ಅಬಕಾರಿ ಕಾಯ್ದೆ ಅಡಿ 822 ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು 156 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.