ಲೋಕಾಯುಕ್ತರ ಹೆಸರಲ್ಲಿ ಅಂಬೇಡ್ಕರ್ ನಿಗಮದ ಕಚೇರಿ ಮೇಲೆ ದಾಳಿ ಬೆದರಿಕೆ: ಆರೋಪಿಗಾಗಿ ಶೋಧ
ಬೆಂಗಳೂರು: ಲೋಕಾಯುಕ್ತ ಉಪಾಧೀಕ್ಷಕ ಎಂದು ಹೇಳಿಕೊಂಡು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದ ಆರೋಪದಡಿ ವ್ಯಕ್ತಿಗಾಗಿ ಇಲ್ಲಿನ ವಿಧಾನಸೌಧ ಪೊಲೀಸರು ಶೋಧ ಕಾರ್ಯ ಕೈಗೊಂಡಿರುವುದಾಗಿ ವರದಿಯಾಗಿದೆ.
ನಗರದ ವಿ.ವಿ.ಟವರ್‍ನ 9ನೇ ಮಹಡಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿ ಮೇಲೆ ದಾಳಿ ನಡೆಸುವುದಾಗಿ ಅನಾಮಧೇಯ ವ್ಯಕ್ತಿ ಬೆದರಿಕೆ ಹಾಕಿದ್ದಾನೆ ಎಂದು ತಿಳಿದುಬಂದಿದೆ.
ಕಾರ್ಪೋರೇಷನ್ ಜನರಲ್ ಮ್ಯಾನೇಜರ್ ಕವಿತಾ ಅವರಿಗೆ ಕರೆ ಮಾಡಿರುವ ಆರೋಪಿ ತನ್ನನ್ನು ಲೋಕಾಯುಕ್ತ ಡಿವೈಎಸ್ಪಿ ಪ್ರಕಾಶ್ ಎಂದು ಹೇಳಿಕೊಂಡಿದ್ದು, ಲೋಕಾಯುಕ್ತ ದಾಳಿ ನಡೆಯಲಿದ್ದು, ಜು.3 ಮತ್ತು 4ರಂದು ಕಚೇರಿಗೆ ಹಾಜರಾಗದಂತೆ ಎಚ್ಚರಿಕೆ ನೀಡಿದ್ದಾನೆ ಎಂದು ಹೇಳಲಾಗಿದೆ.
ಇದರ ಬೆನ್ನಲ್ಲೇ ಕವಿತಾ ಅವರು ಲೋಕಾಯುಕ್ತ ಕಚೇರಿಗೆ ಕರೆ ಮಾಡಿ ಪ್ರಕಾಶ್ ಎಂಬ ವ್ಯಕ್ತಿ ಇದ್ದಾರೆಯೇ ಎಂದು ಪರಿಶೀಲಿಸಿದ್ದಾರೆ. ಇಲ್ಲ ಎಂಬ ಉತ್ತರ ಬಂದ ಬಳಿಕ ಕವಿತಾ ಅವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದೊಂದು ಹುಸಿ ಕರೆ ಎನ್ನುವ ಶಂಕೆ ವ್ಯಕ್ತವಾಗಿದ್ದು, ಆರೋಪಿಯ ಮೊಬೈಲ್ ನಂಬರ್ ಟ್ರ್ಯಾಕ್ ಮಾಡಿ ತನಿಖೆ ಆರಂಂಭಿಸಿರುವುದಾಗಿ ಪೆÇಲೀಸರು ತಿಳಿಸಿದ್ದಾರೆ.