ಲೌಡ್ ಸ್ಪೀಕರ್ ಗಲಾಟೆ ಪ್ರಕರಣ: ಬೆಂಗಳೂರಿನ ನಗರತ್ ಪೇಟೆಯಲ್ಲಿ ಸಂಘ ಪರಿವಾರ ನೇತೃತ್ವದಲ್ಲಿ ಪ್ರತಿಭಟನೆ
ಬೆಂಗಳೂರು, ಮಾ.19: ನಗರತ್ ಪೇಟೆಯ ಅಂಗಡಿಯೊಂದರಲ್ಲಿ ಲೌಡ್ ಸ್ಪೀಕರ್ ಬಳಕೆ ವಿಚಾರವಾಗಿ ಟೆಲಿಕಾಂ ಅಂಗಡಿಯ ಅಂಗಡಿ ಮಾಲಕ ಮುಖೇಶ್ ಮೇಲಿನ ಹಲ್ಲೆಯನ್ನು ಖಂಡಿಸಿ ಸಂಘ ಪರಿವಾರದ ನೇತೃತ್ವದಲ್ಲಿಂದು ಪ್ರತಿಭಟನೆ ನಡೆಯುತ್ತಿದೆ.
ಸಂಸದರಾದ ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಶಾಸಕ ಸುರೇಶ್ ಕುಮಾರ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಮುಖೇಶ್ ತನ್ನ ಅಂಗಡಿಯಲ್ಲಿ ಭಜನೆ ಹಾಡುಗಳನ್ನು ಹಾಕಿದ್ದನ್ನು ಆಕ್ಷೇಪಿಸಿ ಅವರ ಹಲ್ಲೆ ನಡೆಸಲಾಗಿದೆ ಎಂದು ಆರೋಪಿ ಬಿಜೆಪಿ ಹಾಗೂ ಸಂಘ ಪರಿವಾರ ಇಂದು ಮುಖೇಶ್ ಅವರ ಅಂಗಡಿ ಎದುರು ಜಮಾಯಿಸಿ ಪ್ರತಿಭಟನೆ ಹಮ್ಮಿಕೊಂಡಿದೆ. ಸಂಸದರಾದ ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಶಾಸಕ ಸುರೇಶ್ ಕುಮಾರ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಅಂಗಡಿಯಲ್ಲಿ ಲೌಡ್ ಸ್ಪೀಕರ್ ಜೋರಾಗಿ ಹಾಕಿರುವ ವಿಚಾರವಾಗಿ ನಗರದ ಜುಮಾ ಮಸೀದಿ ರಸ್ತೆಯ ಸಿದ್ದಣ್ಣ ಗಲ್ಲಿಯಲ್ಲಿನ ಟೆಲಿಕಾಂ ಅಂಗಡಿಯ ಮಾಲಕ ಮುಖೇಶ್ ಹಾಗೂ ಯುವಕರ ತಂಡವೊಂದರ ನಡುವೆ ಮಾ.17ರಂದು ಸಂಜೆ ಗಲಾಟೆ ನಡೆದಿತ್ತು. ಈ ವೇಳೆ ಮುಖೇಶ್ ಮೇಲೆ ಐವರ ತಂಡ ಹಲ್ಲೆ ನಡೆಸಿತ್ತು. ಈ ಬಗ್ಗೆ ಮುಖೇಶ್ ನೀಡಿರುವ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಾದ ಸುಲೈಮಾನ್, ಶಾನವಾಝ್, ರೋಹಿತ್, ಡ್ಯಾನಿಶ್, ತರುಣ್ ಎಂಬವರನ್ನು ಈಗಾಗಲೇ ಬಂಧಿಸಿರುವುದಾಗಿ ಹೇಳಿದ್ದಾರೆ.
ಹನುಮಾನ್ ಚಾಲೀಸಾ ಹಾಕಿದ್ದಕ್ಕಾಗಲೀ ಅಥವಾ ಆಝಾನ್ ಪ್ರಾರ್ಥನೆಗೆ ಅಡ್ಡಿಯಾಗುತ್ತಿದೆ ಎಂದು ಅಂಗಡಿ ಮಾಲಕನ ಮೇಲೆ ಹಲ್ಲೆ ನಡೆದಿಲ್ಲ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಈ ನಡುವೆ ಸಾಮಾಜಿಕ ಜಾಲತಾಣ ಎಕ್ಸ್ ಪೋಸ್ಟ್ ಮಾಡಿರುವ ಸಚಿವ ದಿನೇಶ್ ಗುಂಡೂರಾವ್, ಲಭ್ಯವಾದ ಎಫ್ಐಆರ್ ಪ್ರತಿ ಮತ್ತು ಹಲ್ಲೆಗೊಳಗಾಗಿರುವ ಮುಖೇಶ್ ನೀಡಿರುವ ಕೈ ಬರಹದ ಪೊಲೀಸ್ ದೂರಿನಲ್ಲಿ ಎಲ್ಲಿಯೂ ನಮಾಝ್ ಅಥವಾ ಆಝಾನ್ ಸಮಯದಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ಮಾಡಿದ್ದಾರೆ ಎಂದು ಎಲ್ಲೂ ಉಲ್ಲೇಖಿಸಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರಚೋದನೆಗೆ ಒಳಗಾಗದೆ ವಿವೇಚನೆಯಿಂದ ವರ್ತಿಸುವಂತೆ ಮನವಿ ಮಾಡಿದ್ದಾರೆ.
ಅಲ್ಲದೆ, ಮಾಧ್ಯಮಗಳು ಮತ್ತು ಬಿಜೆಪಿ ನಾಯಕರು ಆರೋಪಿಸಿದಂತೆ ಪ್ರಕರಣದ ಆರೋಪಿಗಳಲ್ಲಿ ಮುಸ್ಲಿಮರು ಮಾತ್ರವಲ್ಲ, ಆರು ಆರೋಪಿಗಳಲ್ಲಿ ಮೂವರು ಮುಸ್ಲಿಮರು ಮತ್ತು ಇಬ್ಬರು ಹಿಂದೂ ಹೆಸರಿನ ಆರೋಪಿಗಳಿದ್ದಾರೆ ಎಂದು ದಿನೇಶ್ ಗುಂಡೂರಾವ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.