ಕೇಂದ್ರ ಬಜೆಟ್‍ನಲ್ಲಿ ರಾಜ್ಯಕ್ಕೆ ಸೂಕ್ತ ಅನುದಾನ ಸಿಕ್ಕಿಲ್ಲ : ಮಧು ಬಂಗಾರಪ್ಪ

ಬೆಂಗಳೂರು, ಫೆ.3: ಕೇಂದ್ರ ಬಜೆಟ್‍ನಲ್ಲಿ ರಾಜ್ಯಕ್ಕೆ ಸೂಕ್ತ ಅನುದಾನ ಸಿಕ್ಕಿಲ್ಲ. ತೆರಿಗೆ ರೂಪದಲ್ಲಿ ಕೋಟ್ಯಾಂತರ ರೂ.ಗಳು ಕೇಂದ್ರ ಸರಕಾರಕ್ಕೆ ಪಾವತಿಯಾಗಿದ್ದು, ಅದನ್ನು ನಮಗೆ ನೀಡದೆ ಪಕ್ಕದ ರಾಜ್ಯಗಳಿಗೆ ನೀಡುವ ಕೆಲಸವನ್ನು ಕೇಂದ್ರ ಸಕಾರ ಮಾಡುತ್ತಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆರೋಪಿಸಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇನ್ನು ಗ್ಯಾರಂಟಿ ಯೋಜನೆಯಿಂದ ರಾಜ್ಯವು ದೀವಾಳಿಯಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳುತ್ತಾರೆ, ನಿಜವಾಗಿ ದೀವಾಳಿಯಾಗಿರುವುದು ನಾವಲ್ಲ, ಬದಲಾಗಿ ಬಿಜೆಪಿಯವರಾಗಿದ್ದಾರೆ. ನಮ್ಮ ಗ್ಯಾರಂಟಿ ಯೋಜನೆಯನ್ನು ಟೀಕಿಸಿದ್ದ ಬಿಜೆಪಿ, ದಿಲ್ಲಿ ಚುನಾವಣೆಯಲ್ಲಿ ನಮ್ಮ ಗ್ಯಾರಂಟಿಯನ್ನು ನಕಲು ಮಾಡಿದ್ದಾರೆ ಎಂದರು.
ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದಾಗ ಸಿಕ್ಕಾಪಟ್ಟೆ ಸಾಲ ಮಾಡಿದ್ದು, ರಾಜ್ಯದ ಬೊಕ್ಕಸಕ್ಕೆ ಹೊರೆ ಹಾಕಿದ್ದಾರೆ. ಅಲ್ಲದೆ ಈ ಹಿಂದೆ ಬಿಜೆಪಿಯವರು ಕಾಂಗ್ರೆಸ್‍ಗೆ ಮೂರು ಬಾಗಿಲೆಂದು ಹೇಳುತ್ತಿದ್ದರು, ಈಗ ಆವರದ್ದು ಮುನ್ನೂರು ಬಾಗಿಲುಗಳಿವೆ. ಅವರ ಆಂತರಿಕ ಕಿತ್ತಾಟವು ಅದು ಹಿಂದೆ ಮಾಡಿದ ಸರಕಾರದ ಪಾಪದ ಕೊಡವಾಗಿದೆ ಎಂದು ಅವರು ಟೀಕಿಸಿದರು.