ಬೆಂಗಳೂರು: ಮದ್ಯ ಸೇವಿಸಲು ಹಣ ನೀಡದಕ್ಕೆ ತಾಯಿಯ ಹತ್ಯೆಗೈದ ಪುತ್ರ

ಸಾಂದರ್ಭಿಕ ಚಿತ್ರ
ಬೆಂಗಳೂರು: ಮದ್ಯ ಸೇವನೆ ಮಾಡಲು ಹಣ ನೀಡಲು ನಿರಾಕರಿಸಿದ ತಾಯಿಯನ್ನೆ ಕಬ್ಬಿಣದ ರಾಡ್ನಿಂದ ಹಲ್ಲೆಗೈದು ಹತ್ಯೆಗೈದಿರುವ ಆರೋಪ ಪ್ರಕರಣ ಸಂಬಂಧ ಓರ್ವನನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶಾಂತಾಬಾಯಿ (82) ಹತ್ಯೆಗೊಳಗಾದ ತಾಯಿ ಎಂದು ಗುರುತಿಸಲಾಗಿದ್ದು, ಮಹೇಂದ್ರ ಸಿಂಗ್ (56) ಕೊಲೆ ಮಾಡಿದ ಪುತ್ರ ಎಂದು ಗೊತ್ತಾಗಿದೆ. ಗುರುವಾರ ರಾತ್ರಿ 9.30 ರ ಸುಮಾರಿಗೆ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚನ್ನಪಟ್ಟಣ ಮೂಲದ ಮಹೇಂದ್ರ ಸಿಂಗ್, ಬಾಗಲಗುಂಟೆಯ ಮುನೇಶ್ವರ ನಗರದ ಮನೆಯೊಂದರಲ್ಲಿ ತಾಯಿ ಜೊತೆ ಕಳೆದ 5 ವರ್ಷಗಳಿಂದ ವಾಸವಾಗಿದ್ದ. ಈತನ ಕುಡಿತದ ಚಟಕ್ಕೆ ಬೇಸತ್ತು ಪತ್ನಿ ದೂರವಾಗಿದ್ದರು. ದಿನೇ ದಿನೇ ಮದ್ಯ ಸೇವನೆ ಹೆಚ್ಚಾಗಿದ್ದರಿಂದ ಕೆಲಸಕ್ಕೆ ಹೋಗುತ್ತಿರಲಿಲ್ಲ. ಮದ್ಯ ಸೇವಿಸಲು ಪ್ರತಿದಿನ ತಾಯಿ ಬಳಿ ಹಣ ಪಡೆಯುತ್ತಿದ್ದ ಎನ್ನಲಾಗಿದೆ.
ಹತ್ಯೆಯಾದ ಶಾಂತಾಬಾಯಿ ಸರಕಾರಿ ನೌಕರನಾಗಿದ್ದ ಪತಿ ಮೃತಪಟ್ಟಿದ್ದರಿಂದ ಶಾಂತಾಬಾಯಿಗೆ ಪ್ರತಿ ತಿಂಗಳು ಪಿಂಚಣಿ ಹಣ ಬರುತಿತ್ತು. ಅಲ್ಲದೇ ಒಂದು ಮನೆಯ ಬಾಡಿಗೆ ಹಣವೂ ಬರುತಿತ್ತು. ಈ ಆದಾಯದ ಮೂಲದಿಂದಲೇ ಶಾಂತಾಬಾಯಿ ಜೀವನ ಸಾಗಿಸುತ್ತಿದ್ದರು. ಹಣ ನೀಡುವಂತೆ ತಾಯಿಗೆ ಮಗ ಪೀಡಿಸುತ್ತಿದ್ದ. ಇದೇ ವಿಚಾರಕ್ಕಾಗಿ ಗುರುವಾರ ಜಗಳವಾಗಿ ಮನೆಯಲ್ಲಿದ್ದ ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.