ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಬಂದ ಯುವಕ ಅನುಮಾನಾಸ್ಪದ ಸಾವು
ಸಾಂದರ್ಭಿಕ ಚಿತ್ರ
ಬೆಂಗಳೂರು: ಪೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿ, ಕೆಲ ದಿನಗಳ ಹಿಂದೆ ಜಾಮೀನು ಪಡೆದು ಹೊರಬಂದಿದ್ದ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಇಲ್ಲಿನ ಸಂಪಂಗಿರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಸತ್ಯ(20) ಎಂಬಾತ ಮೃತಪಟ್ಟ ಯುವಕ. ಈತ ಸಂಪಂಗಿರಾಮನಗರ ನಿವಾಸಿಯಾಗಿದ್ದು, ಫ್ಲಂಬರ್ ಕೆಲಸ ಮಾಡಿಕೊಂಡಿದ್ದ. ಅದೇ ಏರಿಯಾದಲ್ಲಿ ಬಾಲಕಿಯನ್ನು ಪ್ರೀತಿಸುತ್ತಿದ್ದ. ಆದರೆ, ಬಾಲಕಿಯು ಅಪ್ರಾಪ್ತೆ ಆಗಿರುವುದರಿಂದ ಆತನ ಮನೆಯವರು ಮಗಳ ತಲೆಕೆಡಿಸಿದ್ದಾನೆಂದು ದೂರು ನೀಡಿದ್ದರು ಎಂದು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಎಚ್.ಟೆಕ್ಕಣ್ಣನವರ್ ತಿಳಿಸಿದ್ದಾರೆ.
ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಸಂಪಂಗಿರಾಮನಗರ ಠಾಣಾ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಕೆಲ ದಿನಗಳ ಬಳಿಕ ಜಾಮೀನು ಪಡೆದು ಹೊರಬಂದಿದ್ದ ಸತ್ಯ, ಮತ್ತೆ ಅಪ್ರಾಪ್ತೆಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದ. ಇದು ಆಕೆಯ ಮನೆಯವರೆಗೆ ಗೊತ್ತಾಗಿ ಗಲಾಟೆಯಾಗಿದೆ ಎನ್ನಲಾಗಿದೆ.
ಮೇ 9ರವರೆಗೂ ಮನೆಯಲ್ಲಿದ್ದ ಸತ್ಯ ಶುಕ್ರವಾರ ಬೆಳಗ್ಗೆ ಕಟ್ಟಡದವೊಂದರ ಸಂದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.
ಯುವಕನ ಪೋಷಕರು, ಇದು ಸಹಜ ಸಾವಲ್ಲ. ಯಾರೋ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಎಚ್.ಟೆಕ್ಕಣ್ಣನವರ್ ಮಾಹಿತಿ ನೀಡಿದ್ದಾರೆ.