ನನಗೆ ನಾಯಕ ಎನ್ನುವ ಭಾವನೆ ಇಲ್ಲ, ಇದು ಜನರ ಸೇವೆ ಮಾಡಲು ಸಿಕ್ಕ ಅವಕಾಶ : ಮಂಜುನಾಥ್ ಗೌಡ
ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಬೆಂಗಳೂರು : ನನಗೆ ನಾಯಕ ಎನ್ನುವ ಭಾವನೆ ಇಲ್ಲ. ಇದು ಜನರ ಸೇವೆ ಮಾಡುವ ಅವಕಾಶ ಎಂದು ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ಮಂಜುನಾಥ್ ಗೌಡ ತಿಳಿಸಿದ್ದಾರೆ.
ಸೋಮವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಯುವ ಕಾಂಗ್ರೆಸ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪದಗ್ರಹಣ ಸ್ವೀಕರಿಸಿ ಮಾತನಾಡಿದ ಅವರು, ಕರುನಾಡಿನ ಯುವ ಸಮೂಹಕ್ಕೆ ಸೇವೆ ಮಾಡುವ ಅಮೂಲ್ಯ ಅವಕಾಶವನ್ನು ನನಗೆ ಮಾಡಿಕೊಡಲಾಗಿದೆ ಎಂದರು.
ದೇಶದ ಸ್ವಾತಂತ್ರಕ್ಕೆ ಕಾಂಗ್ರೆಸ್ ಹೋರಾಟ ಮಾಡಿದೆ. ಕಾಂಗ್ರೆಸ್ ಪಕ್ಷದ ತ್ಯಾಗ ಬಲಿದಾನ, ಚಳುವಳಿಗಳನ್ನು ಮಾಡುತ್ತಾ, ಅಪಮಾನಗಳನ್ನು ಸಹಿಸುತ್ತಾ ಎದೆಗಾರಿಕೆಯಿಂದ ಈ ದೇಶವನ್ನು ಕಟ್ಟಿದ್ದು ಕಾಂಗ್ರೆಸ್ ಪಕ್ಷ. ಯುವ ಜನರ ಬದುಲು ಮತ್ತು ಭವಿಷ್ಯವನ್ನು ರೂಪಿಸುತ್ತಲೆ ಪ್ರಜಾಸತ್ತಾತ್ಮಕ ದೇಶವನ್ನು ಕಟ್ಟಿದ್ದು ಕಾಂಗ್ರೆಸ್ ಪಕ್ಷ ಎಂದು ಮಂಜುನಾಥ್ ಗೌಡ ಹೇಳಿದರು.
ಕಾಂಗ್ರೆಸ್ ಪಕ್ಷ ಎನ್ನುವ ದೊಡ್ಡ ಆಲದ ಮರದ ಬೇರುಗಳು ಎಂದರೆ ಯುವ ಮತ್ತು ವಿದ್ಯಾರ್ಥಿ ಕಾಂಗ್ರೆಸ್. ನಾವು ಪಕ್ಷಕ್ಕೆ ನೀರು ಗೊಬ್ಬರ ದಂತೆ ಕೆಲಸ ಮಾಡಬೇಕಾಗಿದೆ. ಯುವ ಕಾಂಗ್ರೆಸ್ ಹುದ್ದೆಗೆ ನಾನು ಅರ್ಹ ಎಂದು ಆಯ್ಕೆ ಮಾಡಿದ ಯುವಕ- ಯುವತಿಯರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ವಿದ್ಯಾರ್ಥಿ ನಾಯಕನಾಗಿದ್ದಾಗ ವಿದ್ಯಾರ್ಥಿಗಳ ಕಷ್ಟಗಳಿಗೆ ನಾನು ಸ್ಪಂದಿಸಿದ್ದೇನೆ. ಅವರ ನೋವಿಗೆ ಹೆಗಲಾಗಿದ್ದೇನೆ. ಮುಂದೆಯೂ ಎಲ್ಲರ ಕಷ್ಟಗಳಿಗೆ ಸ್ಪಂದಿಸುತ್ತೇನೆ ಎಂದು ಮಂಜುನಾಥ್ ಗೌಡ ಹೇಳಿದರು.
ದೇಶ ಕಟ್ಟುವ ಮನಸ್ಥಿತಿ ಇಲ್ಲದ ಚಾಯ್ ವಾಲಾಗಳು ದೇಶದ ಚುಕ್ಕಾಣಿ ಹಿಡಿದ ಪರಿಣಾಮ ದೇಶ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ. ಪಕ್ಕದ ಚೀನಾ ಅಭಿವೃದ್ದಿಯ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದೆ. ಆದರೆ, ನಮ್ಮ ದೇಶದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದಿಂದ ಹಾಳಾಗಿ ಹೋಗಿದೆ. ಹೊಸ ಭರವಸೆ, ಹೊಸ ಆಲೋಚನೆ, ತಂತ್ರಜ್ಞಾನ ಯಾವುದೂ ಹುಟ್ಟುತ್ತಿಲ್ಲ ಎಂದು ಮಂಜುನಾಥ್ ಗೌಡ ತಿಳಿಸಿದರು.
ಉದ್ಯೋಗ ಕೇಳಿದರೆ ಪಕೋಡ ಮಾರಿ ಎನ್ನುತ್ತಾರೆ. ಕೋಮು ಪ್ರಚೋದನೆಯನ್ನು ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಫೇಕ್ ನ್ಯೂಸ್‍ಗಳನ್ನು ಹರಿಬಿಡಲಾಗುತ್ತಿದೆ. ಸರ್ವಜನಾಂಗದ ಶಾಂತಿಯ ತೋಟಕ್ಕೆ ಕೋಮುವಾದದ ಗೂಳಿ ನುಗ್ಗಿಸಲಾಗಿದೆ. ರಾಜಕೀಯ ಹುನ್ನಾರಕ್ಕೆ ಯುವ ಜನಾಂಗವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಮಂಜುನಾಥ್ ಗೌಡ ಹೇಳಿದರು.