ಹಜ್ ಭವನದಲ್ಲಿ ಅಗ್ನಿ ಆಕಸ್ಮಿಕ: ತನಿಖಾ ವರದಿ ನೀಡುವಂತೆ ಪೊಲೀಸರಿಗೆ ದೂರು
ಬೆಂಗಳೂರು: ನಗರದ ಯಲಹಂಕದ ತಿರುಮೇನಹಳ್ಳಿಯಲ್ಲಿರುವ ರಾಜ್ಯ ಹಜ್ ಭವನದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿರುವ ಹಿನ್ನೆಲೆ, ಈ ಕುರಿತು ತನಿಖೆ ನಡೆಸಿ ವರದಿ ನೀಡುವಂತೆ ಕೊತ್ತನೂರು ಪೊಲೀಸ್ ಠಾಣೆಗೆ ರಾಜ್ಯ ಹಜ್ ಸಮಿತಿ ದೂರು ನೀಡಿದೆ.
ಹಜ್ ಭವನದ ಎರಡು ಹಾಗೂ ಮೂರನೆ ಮಹಡಿಯಲ್ಲಿ ನಿರ್ಮಾಣವಾಗುತ್ತಿದ್ದ ಸಮ್ಮೇಳನ ಸಭಾಂಗಣದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಅಪಾರ ಪ್ರಮಾಣದ ಪೀಠೋಪಕರಣಗಳು ಹಾಗೂ ಇನ್ನಿತರೆ ಸಲಕರಣೆಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದು, ಅಗ್ನಿಶಾಮಕ ದಳಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ. ಭವನದಲ್ಲಿ ಸಭಾಂಗಣ ನಿರ್ಮಾಣ ಕಾಮಗಾರಿಯನ್ನು ಕೈಗೊಂಡಿದ್ದ ಸರಕಾರ ಸಂಸ್ಥೆಯಾದ ಕೆ.ಆರ್.ಡಿ.ಎಲ್ ಅಧಿಕಾರಿಗಳು ಘಟನೆ ಬಳಿಕ ಸ್ಥಳಕ್ಕೆ ಭೇಟಿ ನೀಡಿದ್ದು, ಬಹಳಷ್ಟು ನಷ್ಟವಾಗಿರಬಹುದೆಂದು ಅಂದಾಜಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಅಗ್ನಿ ಅವಘಡದ ಕುರಿತು ಪೂರ್ಣ ಮಾಹಿತಿಯನ್ನು ಸರಕಾರಕ್ಕೆ ಶೀಘ್ರವಾಗಿ ಸಲ್ಲಿಸಬೇಕಾದ್ದರಿಂದ ಘಟನೆ ಕುರಿತು ಕೊತ್ತನೂರು ಠಾಣೆಯ ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡು ತನಿಖೆ ನಡೆಸಿ ವರದಿಯನ್ನು ಸಮಿತಿಗೆ ನೀಡಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅಗ್ನಿ ದುರಂತ ಸಂಭವಿಸಿದ ಹಜ್ ಭವನಕ್ಕೆ ಸಚಿವ ಝಮೀರ್ ಅಹಮದ್ ಖಾನ್ ಭೇಟಿ, ಪರಿಶೀಲನೆ
ಅಗ್ನಿ ದುರಂತ ಸಂಭವಿಸಿದ ಹಜ್ ಭವನಕ್ಕೆ ಭಾನುವಾರ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹಮದ್ ಖಾನ್ ಅವರು ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ಸಂದರ್ಭದಲ್ಲಿ ಮಾತಾನಾಡಿದ ಅವರು, ಅಗ್ನಿ ದುರಂತದ ಬಗ್ಗೆ ತನಿಖೆ ನಡೆಸಲಾಗುವುದು. ಮುಖ್ಯಮಂತ್ರಿ ಅವರ ಜತೆ ಚರ್ಚಿಸಿ ಅಗ್ನಿ ದುರಂತದಿಂದ ಹಾನಿಗೀಡಾಗಿರುವ ಸಭಾಂಗಣ ಹಾಗೂ ಗ್ರಂಥಾಲಯ ದುರಸ್ಥಿ ಗೆ ಕ್ರಮ ಕೈಗೊಳ್ಳಲಾಗುವುದು. ಆದಷ್ಟು ಬೇಗ ದುರಸ್ಥಿ ಕಾರ್ಯ ಆರಂಭಿಸಲಾಗುವುದು ಎಂದು ತಿಳಿಸಿದರು.
ಇಲಾಖೆ ನಿರ್ದೇಶಕ ಜಿಲಾನಿ ಮೊಕಾಶಿ, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಸಾರ್ಫ್ರಾಜ್ ಖಾನ್ ಉಪಸ್ಥಿತರಿದ್ದರು.