ಪ್ರಗತಿಪರ, ಶೋಷಿತ ಸಮುದಾಯಗಳ ವಿದ್ಯಾರ್ಥಿಗಳ ಪಂಜಿನ ಮೆರವಣಿಗೆ
ರಾಜ್ಯಪಾಲರ ಸರ್ವಾಧಿಕಾರ ಧೋರಣೆ ಖಂಡನೀಯವಾದದ್ದು : ಮಾವಳ್ಳಿ ಶಂಕರ್
ಬೆಂಗಳೂರು : ಜನನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹತ್ತಿಕ್ಕಿ ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಮುಂದಾಗಿರುವ ರಾಜ್ಯಪಾಲರ ಸರ್ವಾಧಿಕಾರ ಧೋರಣೆ ಖಂಡನೀಯವಾದದ್ದು ಎಂದು ದಲಿತ ಮುಖಂಡ ಮಾವಳ್ಳಿ ಶಂಕರ್ ತಿಳಿಸಿದ್ದಾರೆ.
ಬುಧವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಶೋಷಿತ ಸಮುದಾಯಗಳ ಒಕ್ಕೂಟ ಹಾಗೂ ಹಿಂದುಳಿದ ಜಾತಿಗಳ ಒಕ್ಕೂಟದ ಸಹಯೋಗದಲ್ಲಿ ಪ್ರಗತಿಪರ, ಶೋಷಿತ ಸಮುದಾಯಗಳ ವಿದ್ಯಾರ್ಥಿ ಸಂಘಗಳು ರಾಜ್ಯಪಾಲರ ನಡೆ ವಿರೋಧಿಸಿ, ಬಿಜೆಪಿ-ಜೆಡಿಎಸ್ ಪಿತೂರಿ ಖಂಡಿಸಿ ನಡೆಸಿದ ‘ಪಂಜಿನ ಮೆರವಣಿಗೆ’ಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಿದ್ದರಾಮಯ್ಯ ಅವರ ವಿರುದ್ಧ ಪಿತೂರಿ ಪ್ರೇರಿತ ಅಜೆಂಡಾ ರೂಪಿಸಿ ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ಕೊಡಿಸುವಲ್ಲಿ ಕೇಂದ್ರ ಸರಕಾರ ರಾಜಭವನವನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ಹೇಳಿದರು.
ಪಾರದರ್ಶಕ ಆಡಳಿತದ ಮೂಲಕ ಎರಡನೇ ಬಾರಿ ರಾಜ್ಯದ ಚುಕ್ಕಾಣಿ ಹಿಡಿದಿರುವ ಸಿದ್ದರಾಮಯ್ಯ ಅವರ ವಿರುದ್ಧ ತರಾತುರಿಯಲ್ಲಿ ಪ್ರಾಸಿಕ್ಯೂಷನ್‍ಗೆ ರಾಜ್ಯಪಾಲರು ಅನುಮತಿ ನೀಡಿರುವುದು ಸಾಂವಿಧಾನಿಕ ನಡೆಯಲ್ಲ ಎಂದು ಮಾವಳ್ಳಿ ಶಂಕರ್ ತಿಳಿಸಿದರು.
ವಿದ್ಯಾರ್ಥಿ ಮುಖಂಡ ಮುಹಮ್ಮದ್ ಪೀರ್ ಮಾತನಾಡಿ, ಕೇಂದ್ರ ಸರಕಾರದ ಒತ್ತಡಕ್ಕೆ ಮಣೆ ಹಾಕಿರುವ ರಾಜ್ಯಪಾಲರು ಸಂವಿಧಾನ ಬಾಹಿರವಾಗಿ ನಡೆದುಕೊಂಡಿದ್ದಾರೆ. ಪ್ರಜಾಸತ್ತಾತ್ಮಕವಾಗಿ ರೂಪಿತವಾದ ರಾಜ್ಯ ಕಾಂಗ್ರೆಸ್ ಸರಕಾರವನ್ನು ಕೆಡವಲು ಕೇಂದ್ರ ಸರಕಾರ ರಾಜ್ಯಪಾಲರ ಮುಖಾಂತರ ಷಡ್ಯಂತ ನಡೆಸುತ್ತಿದೆ ಎಂದು ಆರೋಪಿಸಿದರು.
ಪಂಜಿನ ಮೆರವಣಿಗೆಯಲ್ಲಿ ವಿದ್ಯಾರ್ಥಿ ಮುಖಂಡರಾದ ಸತೀಶ್.ಜಿ.ಕೆ., ಚಂದ್ರು, ಶ್ರೀನಾಥ್ ಪೂಜಾರಿ ಸೇರಿ ನೂರಾರು ಮಂದಿ ಭಾಗವಹಿಸಿದ್ದರು.