ರಾಜ್ಯದಲ್ಲಿ ಷೆರ್ವನ್ ಕಂಪನಿಯಿಂದ 8,300 ಕೋಟಿ ರೂ. ಹೂಡಿಕೆ : ಎಂ.ಬಿ.ಪಾಟೀಲ್
ಬೆಂಗಳೂರು: ಇಂಧನ ಪರಿಹಾರಗಳನ್ನು ನೀಡುವಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಷೆರ್ವನ್ ಕಂಪನಿ, ಬೆಂಗಳೂರಿನಲ್ಲಿ ತನ್ನ ಎಂಜಿನಿಯರಿಂಗ್ ಮತ್ತು ನಾವೀನ್ಯತೆ ಶ್ರೇಷ್ಠತಾ ಕೇಂದ್ರ (ಇಎನ್‌ಜಿಐಎನ್‌ಇ) ಸ್ಥಾಪಿಸಲು 8,300 ಕೋಟಿ ರೂ. ಹೂಡಿಕೆ ಮಾಡುವುದಾಗಿ ಇಂದು ಇಲ್ಲಿ ಪ್ರಕಟಿಸಿದೆ.
ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಅವರ ಜೊತೆಗೆ ಷೆರ್ವನ್ ನಿಯೋಗವು ನಡೆಸಿದ ಉನ್ನತ ಮಟ್ಟದ ಸಭೆಯಲ್ಲಿ ಈ ಹೂಡಿಕೆ ಘೋಷಿಸಲಾಗಿದೆ. ಸಭೆಯಲ್ಲಿ ಷೆರ್ವನ್ ಇಂಡಿಯಾ ಮುಖ್ಯಸ್ಥ ಡಾ.ಅಕ್ಷಯ್ ಸಾಹ್ನಿ, ಜನರಲ್ ಮ್ಯಾನೇಜರ್ ಕೇಟ್ ಕಲಘನ್ ಅವರು ಉಪಸ್ಥಿತರಿದ್ದರು.
"ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿ ಉತ್ತೇಜಿಸುವಲ್ಲಿ ಕರ್ನಾಟಕವು ನಿರಂತರವಾಗಿ ಮುನ್ನಡೆ ಸಾಧಿಸುತ್ತಿದೆ. 8,300 ಕೋಟಿ ರೂ. ಮೊತ್ತದ ಈ ಹೂಡಿಕೆ ಕಾರ್ಯಗತಗೊಳಿಸುವಲ್ಲಿನ ರಾಜ್ಯ ಸರ್ಕಾರ ಮತ್ತು ಷೆರ್ವನ್ ಕಂಪನಿ ನಡುವಣ ಸಹಯೋಗವು ಕರ್ನಾಟಕದ ಎಂಜಿನಿಯರಿಂಗ್ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿನ ಮಹತ್ವದ ಪ್ರಗತಿಗೆ ಸ್ಪಷ್ಟ ನಿದರ್ಶನವಾಗಿದೆ. ನಾವೀನ್ಯತೆ, ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿ ಉತ್ತೇಜಿಸಲು ರಾಜ್ಯ ಸರ್ಕಾರವು ಬದ್ಧವಾಗಿದೆʼ ಎಂದು ಸಚಿವರು ತಿಳಿಸಿದ್ದಾರೆ.
ಷೆರ್ವನ್ ಇಂಡಿಯಾದ ಮುಖ್ಯಸ್ಥ ಅಕ್ಷಯ್ ಸಾಹ್ನಿ ಅವರು ಈ ಹೊಸ ಕೇಂದ್ರದ ಮುನ್ನೋಟದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು, "ಕೈಗೆಟುಕುವ, ವಿಶ್ವಾಸಾರ್ಹವಾದ ಶುದ್ಧ ಇಂಧನ ಒದಗಿಸಲು ಭಾರತದ ಅಸಾಧಾರಣ ಪ್ರತಿಭಾನ್ವಿತರು ನಮ್ಮ ಜಾಗತಿಕ ಜಾಲದ ಸಂಪನ್ಮೂಲ ಹಾಗೂ ಪರಿಣತಿ ಜೊತೆಗೆ ಕೆಲಸ ಮಾಡಲು ಈ ಕೇಂದ್ರವು ಅವಕಾಶ ಒದಗಿಸಲಿದೆʼ ಎಂದು ಹೇಳಿದ್ದಾರೆ.
ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್ ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣ ಮತ್ತು ಷೆರ್ವನ್‌ನ ಪ್ರತಿನಿಧಿಗಳೂ ಉಪಸ್ಥಿತರಿದ್ದರು.