2ನೇ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ; ಶೀಘ್ರವೇ ಪ್ರಸ್ತಾವ ಸಲ್ಲಿಕೆ : ಎಂ.ಬಿ.ಪಾಟೀಲ್

ಬೆಂಗಳೂರು : ರಾಜಧಾನಿ ಬೆಂಗಳೂರಿನ ಎರಡನೆ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಎರಡು ಸ್ಥಳಗಳನ್ನು ಆಯ್ಕೆ ಮಾಡಲಾಗಿದ್ದು, ಶೀಘ್ರವೇ ಈ ಸಂಬಂಧ ಪ್ರಸ್ತಾವನೆಯನ್ನು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ಕು ಸ್ಥಳಗಳು ನಮ್ಮ ಪರಿಶೀಲನೆಯಲ್ಲಿದ್ದವು. ಅವುಗಳ ಪೈಕಿ ಎರಡು ಸ್ಥಳಗಳನ್ನು ಆಯ್ಕೆ ಮಾಡಿದ್ದೇವೆ. ಈ ಸಂಬಂಧ ಮುಖ್ಯಮಂತ್ರಿ ಜೊತೆ ಮತ್ತೊಂದು ಸಭೆ ನಡೆಸಿ, ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಮುನ್ನ ಅಥವಾ ನಂತರ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಕಳುಹಿಸಿಕೊಡುತ್ತೇವೆ ಎಂದು ಹೇಳಿದರು.
ವಿಮಾನ ನಿಲ್ದಾಣಕ್ಕೆ ಸ್ಥಳವನ್ನು ಅರ್ಹತೆಯ ಮೇಲೆ ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ನಾವು ಕಳುಹಿಸಿಕೊಟ್ಟ ಪ್ರಸ್ತಾವನೆಯನ್ನು ಪರಿಶೀಲಿಸಿದ ಬಳಿಕ ವಿಮಾನ ನಿಲ್ದಾಣ ಪ್ರಾಧಿಕಾರದವರು ಸ್ಥಳ ಪರಿಶೀಲನೆಯನ್ನು ನಡೆಸಲಿದ್ದಾರೆ. ಆನಂತರ, ವಿಮಾನ ನಿಲ್ದಾಣ ನಿರ್ಮಾಣಕ್ಕೆ ಯಾವ ಜಾಗ ಸೂಕ್ತ ಎಂಬುದನ್ನು ತಿಳಿಸುತ್ತಾರೆ ಎಂದು ಎಂ.ಬಿ.ಪಾಟೀಲ್ ಹೇಳಿದರು.
ಒಂದು ವೇಳೆ ನಾವು ಕಳುಹಿಸಿಕೊಟ್ಟಿರುವ ಎರಡು ಸ್ಥಳಗಳ ಬಗ್ಗೆ ವಿಮಾನ ನಿಲ್ದಾಣ ಪ್ರಾಧಿಕಾರದವರು ಸಹಮತಿ ವ್ಯಕ್ತಪಡಿಸಿದರೆ. ಆ ಪೈಕಿ ಒಂದು ಸ್ಥಳವನ್ನು ನಾವು ರಾಜ್ಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಚರ್ಚಿಸಿ ಆಯ್ಕೆ ಮಾಡುತ್ತೇವೆ ಎಂದು ಅವರು ಹೇಳಿದರು.
ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಸಂದರ್ಭದಲ್ಲಿ ಮಾಡಿಕೊಂಡಿರುವ ಒಪ್ಪಂದ ಪ್ರಕಾರ ನಾವು 2033ರ ವರೆಗೆ ಹೊಸ ವಿಮಾನ ನಿಲ್ದಾಣ ಮಾಡುವಂತಿಲ್ಲ. ಆದರೆ, ಪ್ರಕ್ರಿಯೆ ಈಗ ಆರಂಭಿಸಿದರೆ ಒಪ್ಪಂದ ಅಂತ್ಯವಾಗುವ ವೇಳೆಗೆ ಎಲ್ಲವೂ ಸರಿಯಾಗಲಿದೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.