ರಾಜ್ಯದಲ್ಲಿ ಲಿಂಗಾಯತರನ್ನು ಒಡೆದು ಆಳುವ ಅಜೆಂಡಾ ಕೆಲಸ ಮಾಡುತ್ತಿದೆ : ಎಂ.ಬಿ.ಪಾಟೀಲ್
ವಚನ ದರ್ಶನ: ‘ಸತ್ಯ ವರ್ಸಸ್ ಮಿಥ್ಯ' ಕೃತಿ ಬಿಡುಗಡೆ

ಬೆಂಗಳೂರು: ರಾಜ್ಯದಲ್ಲಿ ಲಿಂಗಾಯತ ಸಮುದಾಯವನ್ನು ಒಡೆದು ಆಳುವ ಒಂದು ಅಜೆಂಡಾ ಕೆಲಸ ಮಾಡುತ್ತಿದೆ. ‘ವಚನ ದರ್ಶನ' ಪುಸ್ತಕವು ಇದರ ಭಾಗವಾಗಿದೆ ಎಂದು ಬೃಹತ್ ಕೈಗಾರಿಕ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಗುರುವಾರ ಜಾಗತಿಕ ಲಿಂಗಾಯತ ಮಹಾಸಭಾ, ಅಖಿಲ ಭಾರತ ವೀರಶೈವ ಮಹಾಸಭಾ, ಲಿಂಗಾಯತ ಮಠಾಧೀಶರ ಒಕ್ಕೂಟ ಸಹಯೋಗದೊಂದಿಗೆ ನಗರದ ಬಸವ ಸಮಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ವಚನ ದರ್ಶನ: ಸತ್ಯ v/s ಮಿಥ್ಯ' ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ವಚನಗಳು ಬರದೇ ಇದ್ದಿದ್ದರೆ ಇಂದು ನಾವು ಯಾರೂ ಇರುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
ವಚನಗಳ ಬಗೆಗಿನ ಚರ್ಚೆಯನ್ನು ನಾವು ವಿರೋಧಿಸುವುದಿಲ್ಲ. ಆದರೆ ಅದರ ಹಿಂದೆ ಇರುವ ಕೆಟ್ಟ ಅಜೆಂಡಾವನ್ನು ನಾವು ಸಹಿಸುವುದಿಲ್ಲ. ಈ ನಿಟ್ಟಿನಲ್ಲಿ ಲಿಂಗಾಯತ ಸ್ವಾಮೀಜಿಗಳು ಮತ್ತು ಮಠಗಳು ಮಾಡಬೇಕಾದ ಕೆಲಸ ಅಗಾಧವಾಗಿದೆ. ವಚನಗಳ ಸ್ವೋಪಜ್ಞತೆಯನ್ನು ವಿರೋಧಿಸುವ ವಚನ ದರ್ಶನ ಪುಸ್ತಕಕ್ಕೆ ಲೇಖನ ಬರೆದಿರುವವರೂ ಲಿಂಗಾಯತರೇ. ಅದರ ಬಿಡುಗಡೆ ಕಾರ್ಯಕ್ರಮಗಳು ನಡೆದಿರುವುದು ಕೂಡ ಲಿಂಗಾಯತರ ಮಠಗಳಲ್ಲೇ. ಆದರೆ ಅದನ್ನು ಬಿಡುಗಡೆ ಮಾಡಿದವರು ಮಾತ್ರ ಲಿಂಗಾಯತರಲ್ಲ. ಇದು ರಾಜ್ಯದಲ್ಲಿ ಸಮುದಾಯದ ಅವಸ್ಥೆಯಾಗಿದೆ ಎಂದು ವಿಷಾಧಿಸಿದರು.
ಒಕ್ಕಲಿಗರಲ್ಲಿ 104 ಉಪಪಂಗಡಗಳಿದ್ದರೂ ಅವರಲ್ಲಿ ಒಡಕಿಲ್ಲ. ಆ ಸಮುದಾಯಕ್ಕೆ ಒಬ್ಬರೇ ಸ್ವಾಮೀಜಿ ಮತ್ತು ಒಂದೇ ಅಧಿಕಾರ ಕೇಂದ್ರವಿದೆ. ಆದರೆ ಲಿಂಗಾಯತರು ಉಪಪಂಗಡಗಳ ಕಿತ್ತಾಟದಲ್ಲಿ ಹರಿದು ಹಂಚಿಹೋಗಿದ್ದಾರೆ ಎಂದರು.
ಲಿಂಗಾಯತರ ಜನಸಂಖ್ಯೆ 2 ಕೋಟಿಯಷ್ಟಿದೆ. ಆದರೆ ಉಪಪಂಗಡಗಳ ಕಚ್ಚಾಟದಿಂದ ಜಾತಿ ಗಣತಿಯಲ್ಲಿ ನಮ್ಮ ಜನಸಂಖ್ಯೆ 65 ಲಕ್ಷವಷ್ಟೇ ಇದೆ ಎಂದು ಮಾಧ್ಯಮಗಳಲ್ಲಿ ಬರುತ್ತಿದೆ. ಇದಕ್ಕೆ ಮತ್ತೊಂದು ಜಾತಿಗಣತಿ ಉತ್ತರವಲ್ಲ. ಇಡೀ ವೀರಶೈವ ಲಿಂಗಾಯತರೆಲ್ಲ ಒಂದೇ ಶೀರ್ಷಿಕೆಯಡಿ ಬರಬೇಕು. ಆಗ ಮಾತ್ರ ಸಮುದಾಯದ ಯುವಜನರಿಗೆ ಮೀಸಲಾತಿ ಸಿಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಸ್ವಾಮೀಜಿ, ಬೇಲಿಮಠದ ಶಿವರುದ್ರ ಸ್ವಾಮೀಜಿ, ಬಸವಧರ್ಮ ಪೀಠದ ಗಂಗಾ ಮಾತಾಜಿ, ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮಿಗಳು, ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್, ಸಾಹಿತಿ ಗೊ.ರು.ಚನ್ನಬಸಪ್ಪ, ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಉಪಸ್ಥಿತರಿದ್ದರು.
‘ಲಿಂಗಾಯತ ಸಮುದಾಯದಲ್ಲಿ ಉಪಪಂಗಡಗಳ ಮೇಲಾಟ ಕೊನೆಯಾಗದೆ ಇದ್ದರೆ ಉಳಿಗಾಲವಿಲ್ಲ. ಅಂತಹ ಪ್ರಯತ್ನ ಇಂದು ಆರಂಭವಾಗಿದೆ. ಸಮುದಾಯದ ಒಳಗೆ ಇರುವ ವ್ಯತ್ಯಾಸಗಳು ಇನ್ನು ಇರಬಾರದು’
-ಬಸವರಾಜ ಹೊರಟ್ಟಿ, ಪರಿಷತ್ ಸಭಾಪತಿ