ಸಿಎಸ್‍ಆರ್ ನಿಧಿ ಬಳಿಕೆ ಕುರಿತು ಪರಿಶೀಲನೆ: ಎಂ.ಬಿ.ಪಾಟೀಲ್

ಬೆಂಗಳೂರು : ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ(ಸಿಎಸ್‍ಆರ್) ಅನುದಾನವನ್ನು ಶಾಲೆ, ಅಂಗನವಾಡಿ ಕಟ್ಟಡ ಕಾಮಗಾರಿಗಳಿಗೆ ನೀಡುವ ಕುರಿತಂತೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಶುಕ್ರವಾರ ವಿಧಾನಸಭೆಯಲ್ಲಿ ಗಮನ ಸೆಳೆಯುವ ಸೂಚನೆ ವೇಳೆ ಜೆಡಿಎಸ್ ಸದಸ್ಯ ಜಿ.ಟಿ. ದೇವೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಅಂಗನವಾಡಿ ಕಟ್ಟಡಗಳಿಗೂ ಸಿಎಸ್‍ಆರ್ ಅನುದಾನ ನೀಡುವ ಬಗ್ಗೆ ಸರಕಾರ ಸಕಾರಾತ್ಮಕವಾಗಿದೆ. ಸದ್ಯದಲ್ಲೇ ಈ ಸಂಬಂಧ ಮಾರ್ಗಸೂಚಿ ರೂಪಿಸಲಾಗುವುದು ಎಂದು ಹೇಳಿದರು.
ಸಿಎಸ್‍ಆರ್ ಅನುದಾನವನ್ನು ಆರೋಗ್ಯ, ಶಿಕ್ಷಣ, ಕೌಶಲ್ಯ ತರಬೇತಿ, ಪರಿಸರ ನಿಯಂತ್ರಣ, ನೀರಿನ ಸೌಕರ್ಯ ಇತ್ಯಾದಿಗಳಿಗೆ ಉಪಯೋಗಿಸಲಾಗಿದೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಕೆಐಎಡಿಬಿ ವತಿಯಿಂದ 5 ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಲಾಗಿದ್ದು, 1181 ಕೈಗಾರಿಕೆಗಳಿವೆ ಎಂದು ಅವರು ತಿಳಿಸಿದರು.
ಕೇಂದ್ರ ಸರಕಾರದ ಕಂಪೆನಿ ಕಾಯ್ದೆ 2013ರ ಕಲಂ 135ರ ಮಾರ್ಗಸೂಚಿ ಅಡಿಯಲ್ಲಿ 500 ಕೋಟಿ ರೂ. ಹಾಗೂ ಹೆಚ್ಚಿನ ನಿವ್ವಳ ಮೌಲ್ಯವಿರುವ ಅಥವಾ 1,000 ಕೋಟಿ ರೂ. ಹಾಗೂ ಹೆಚ್ಚಿನ ವಹಿವಾಟು ಕಂಪನಿಗಳು ಸಿಎಸ್‍ಆರ್ ನಿಧಿ ಹಣ ನೀಡಬೇಕು. 5 ಕೋಟಿ ಹಾಗೂ ಹೆಚ್ಚಿನ ನಿವ್ವಳ ಲಾಭ ಹೊಂದಿರುವ ಉದ್ಯಮಗಳು ಹಿಂದಿನ 3 ವರ್ಷಗಳ ಕನಿಷ್ಠ ಶೇ.2ರಷ್ಟು ಸರಾಸರಿ ನಿವ್ವಳ ಲಾಭಾಂಶವನ್ನು ಸಿಎಸ್‍ಆರ್ ಯೋಜನೆ, ಕಾರ್ಯಕ್ರಮಗಳಿಗೆ ಖರ್ಚು ಮಾಡಬೇಕಾಗಿರುತ್ತದೆ ಎಂದು ಅವರು ಹೇಳಿದರು.