ಮುಲ್ಕಿ ತಾಲೂಕಿನ ಗ್ರಾಮಗಳ ಭೂಸ್ವಾಧೀನ ಪ್ರಕ್ರಿಯೆಗೆ ಶೇ.90ರಷ್ಟು ರೈತರ ಬೆಂಬಲ : ಎಂ.ಬಿ. ಪಾಟೀಲ್

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲ್ಲೂಕಿನ ಕೊಲ್ಲೂರು, ಬಳ್ಕುಂಜೆ ಮತ್ತು ಉಳೆಪಾಡಿ ಗ್ರಾಮಗಳಲ್ಲಿರುವ ಶೇ.90ಕ್ಕಿಂತಲೂ ಹೆಚ್ಚಿನ ರೈತರು ಭೂಸ್ವಾಧೀನ ಪ್ರಕ್ರಿಯೆಯನ್ನು ಬೆಂಬಲಿಸಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟಪಡಿಸಿದ್ದಾರೆ.
ಬುಧವಾರ ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ವೇಳೆ ಕಾಂಗ್ರೆಸ್ ಸದಸ್ಯ ಐವನ್ ಡಿ’ಸೋಜಾ ಪ್ರಶ್ನೆಗೆ ಉತ್ತರಿಸಿದ ಅವರು, ಮುಲ್ಕಿ ತಾಲ್ಲೂಕಿನ ಗ್ರಾಮಗಳಲ್ಲಿಯೂ ಕೆ.ಐ.ಎ.ಡಿ.ಬಿ. ಕೈಗಾರಿಕಾ ಪ್ರದೇಶಾಭಿವೃದ್ಧಿ ಯೋಜನೆಗಾಗಿ ಸುಮಾರು 1091 ಎಕರೆ ಪ್ರದೇಶಗಳನ್ನು ಸ್ವಾಧೀನಪಡಿಸುವ ಪ್ರಕ್ರಿಯೆ ಪ್ರಾರಂಭಿಸಿದ್ದು, ಸರ್ವೆ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಗ್ರಾಮಗಳಲ್ಲಿ ಶೇ.90ಕ್ಕಿಂತಲೂ ಹೆಚ್ಚಿನ ರೈತರು ಭೂಸ್ವಾಧೀನ ಪ್ರಕ್ರಿಯೆಯನ್ನು ಬೆಂಬಲಿಸಿರುವುದು ಕಲಂ 28(3)ರ ವಿಚಾರಣೆ ವೇಳೆಯಲ್ಲಿ ಕಂಡುಬಂದಿರುತ್ತದೆ. ಉಳಿದಂತೆ ವಿರೋಧ ವ್ಯಕ್ತಪಡಿಸಿದ ಸುಮಾರು 191 ಎಕರೆ ಜಮೀನಿನಲ್ಲಿ ಕಟ್ಟಡಗಳು, ವಾಸದ ಮನೆಗಳು, ಮತ್ತಿತರೆ ಅಭಿವೃದ್ಧಿ ಚಟುವಟಿಕೆಗಳು ನಡೆದಿದ್ದಲ್ಲಿ, ನಿಯಮಾನುಸಾರ ಪರಿಶೀಲಿಸಿ ಭೂಮಾಲೀಕರಿಗೆ ಅನಾನುಕೂಲವಾಗದಂತೆ ಹಾಗೂ ಕೈಗಾರಿಕಾ ಪ್ರದೇಶದ ಆಯಕಟ್ಟಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗುತ್ತದೆ ಎಂದು ಅವರು ತಿಳಿಸಿದರು.