ವಿವಿಗಳ ಗುಣಮಟ್ಟ ಶಿಕ್ಷಣ, ಸಂಶೋಧನೆಗೆ ನೆರವು ನೀಡಲು ಸಿದ್ಧ : ಸಚಿವ ಡಾ.ಸುಧಾಕರ್

ಬೆಂಗಳೂರು : ರಾಜ್ಯದ ಸಾರ್ವಜನಿಕ ವಿಶ್ವ ವಿದ್ಯಾಲಯಗಳಲ್ಲಿ ಗುಣಮಟ್ಟ ಶಿಕ್ಷಣ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ರಾಜ್ಯ ಸರಕಾರ ಸಕಲ ನೆರವು ಒದಗಿಸಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಭರವಸೆ ನೀಡಿದ್ದಾರೆ.
ಮಂಗಳವಾರ ಇಲ್ಲಿನ ಬೆಂಗಳೂರು ನಗರ ವಿವಿಯಲ್ಲಿ(ಬಿಸಿಯು) ವೋಲ್ವರ್ ಹ್ಯಾಂಪ್ಟನ್ ಸಂಶೋಧನಾ ಮತ್ತು ಅನ್ವೇಷಣಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ರಾಜ್ಯದ ಸರಕಾರಿ ವಿಶ್ವವಿದ್ಯಾಲಯಗಳು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ. ಹೀಗಾಗಿ ವಿದೇಶ ಸೇರಿ ಅನ್ಯರಾಜ್ಯ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಪಡೆಯಲು ಇಲ್ಲಿಗೆ ಬರುತ್ತಿದ್ದಾರೆ. ರಾಜ್ಯ ಸರಕಾರವು ವಿವಿಗಳ ಶಿಕ್ಷಣ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ಎಲ್ಲ ರೀತಿಯ ನೆರವು ಒದಗಿಸಲಿದೆ ಎಂದರು.
ಶತಮಾನಕ್ಕೂ ಹೆಚ್ಚು ಸುದೀರ್ಘ ಇತಿಹಾಸವಿರುವ ಸೆಂಟ್ರಲ್ ಕಾಲೇಜಿನಲ್ಲಿ ಕೇಂದ್ರಿತವಾದ ಬಿಸಿಯು ಮತ್ತು ಯುನೈಟೆಡ್ ಕಿಂಗ್ಡಮ್‍ನ ಅತ್ಯಂತ ಪುರಾತನ ವೋಲ್ವರ್ ಹ್ಯಾಂಪ್ಟನ್ ವಿಶ್ವವಿದ್ಯಾಲಯದ ಜಂಟಿ ಸಹಭಾಗಿತ್ವದಲ್ಲಿ ನೂತನ ಸಂಶೋಧನಾ ಕೇಂದ್ರ ಆರಂಭವಾಗಿದೆ. ಈ ಕೇಂದ್ರವು ರಾಜ್ಯದ ವಿದ್ಯಾರ್ಥಿಗಳಿಗೆ ಹೊಸ ಅವಕಾಶ ಸೃಷ್ಟಿಸಲಿದೆ ಎಂದು ಅವರು ಹೇಳಿದರು.
ವೋಲ್ವರ್ ಹ್ಯಾಂಪ್ಟನ್ ಸಂಶೋಧನಾ ಮತ್ತು ಅನ್ವೇಷಣಾ ಕೇಂದ್ರದ ನಿರ್ದೇಶಕ ಪ್ರೊ.ಸುರೇಶ್ ರೇಣುಕಪ್ಪ ಮಾತನಾಡಿ, ಕೇಂದ್ರವು ಹವಾಮಾನ ಬದಲಾವಣೆ, ಆರೋಗ್ಯ ರಕ್ಷಣೆ, ಸ್ಮಾರ್ಟ್ ಸಿಟಿ ಮತ್ತು ಸ್ಮಾರ್ಟ್ ಗ್ರಾಮಗಳ ನಿರ್ಮಾಣ, ಇಂಧನ ಭದ್ರತೆ, ತ್ಯಾಜ್ಯದಿಂದ ಆದಾಯ ಗಳಿಕೆ, ಮಾಲಿನ್ಯ ನಿಯಂತ್ರಣ ಮತ್ತು ಬ್ರಾಂಡ್ ಬೆಂಗಳೂರು ಯೋಜನೆ ಮುಂತಾದ ಮಹತ್ವದ ವಿಷಯಗಳ ಅಧ್ಯಯನ ಮತ್ತು ಸಂಶೋಧನೆಗೆ ಆದ್ಯತೆ ನೀಡಲಿದೆ ಎಂದರು.
ಕಾರ್ಯಕ್ರಮದಲ್ಲಿ ವೋಲ್ವರ್ ಹ್ಯಾಂಪ್ಟನ್ ವಿಶ್ವವಿದ್ಯಾಲಯದ ಸಮಕುಲಪತಿ ಪ್ರೊ. ಪ್ರಶಾಂತ್ ಪಿಳ್ಳೈ, ಬಿಸಿಯು ವಿಶ್ರಾಂತ ಕುಲಪತಿ ಪ್ರೊ.ಲಿಂಗರಾಜ ಗಾಂಧಿ, ವೋಲ್ವರ್ ಹ್ಯಾಂಪ್ಟನ್ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ. ಇಬ್ರಾಹಿಂ ಆದಿಯಾ, ಬಿಸಿಯು ಪ್ರಭಾರ ಕುಲಪತಿ ಪ್ರೊ.ಕೆ.ಆರ್.ಜಲಜಾ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.