ಬೆಂಗಳೂರು | ನಮ್ಮ ಮೆಟ್ರೋ ಟ್ರ್ಯಾಕ್ಗೆ ಹಾರಿ ವ್ಯಕ್ತಿ ಆತ್ಮಹತ್ಯೆ : ಸಂಚಾರ ಸ್ಥಗಿತ
ಸಾಂದರ್ಭಿಕ ಚಿತ್ರ
ಬೆಂಗಳೂರು: ಮೆಟ್ರೋ ರೈಲಿನ ಹಳಿಗೆ ಹಾರಿ 35 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ನಾಗಸಂದ್ರ-ರೇಷ್ಮೇ ಸಂಸ್ಥೆ ಹಸಿರು ಮಾರ್ಗದ ದೊಡ್ಡಕಲ್ಲಸಂದ್ರ ನಿಲ್ದಾಣದಲ್ಲಿ ಶನಿವಾರ ವರದಿಯಾಗಿದೆ.
ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮೃತರ ಗುರುತು ಪತ್ತೆಯಾಗಿಲ್ಲ. ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣಕ್ಕೆ ರೈಲು ಬರುತ್ತಿದ್ದಂತೆ ವ್ಯಕ್ತಿಯು ಹಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆ ನಂತರ ಕೆಲಕಾಲ ಮೆಟ್ರೋ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ವ್ಯಕ್ತಿಯ ಮೃತದೇಹವನ್ನು ಹೊರತೆಗೆದು ಸ್ಥಳೀಯ ಆಸ್ಪತ್ರೆಗೆ ರವಾನಿಸಿರುವುದಾಗಿ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಕೋಣನಕುಂಟೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ನಮ್ಮ ಮೆಟ್ರೋ, "35 ವರ್ಷದ ವ್ಯಕ್ತಿಯೊಬ್ಬರು ದೊಡ್ಡಕಲ್ಲಸಂದ್ರ ನಿಲ್ದಾಣದಲ್ಲಿ 5.45 ಗಂಟೆಗೆ ಸಮೀಪಿಸುತ್ತಿರುವ ರೈಲಿನ ಮುಂದೆ ಜಿಗಿದಿದ್ದಾರೆ. ಹಸಿರು ಮಾರ್ಗದಲ್ಲಿ ಯಲಚೇನಹಳ್ಳಿ ಮತ್ತು ಸಿಲ್ಕ್ ಇನ್ಸ್ಟಿಟ್ಯೂಟ್ ನಿಲ್ದಾಣಗಳ ನಡುವೆ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ, ಉಳಿದ ಮಾರ್ಗದಲ್ಲಿ ಸೇವೆಗಳು ಲಭ್ಯವಿದೆ" ಎಂದು ತಿಳಿಸಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, 35 ವರ್ಷದ ವ್ಯಕ್ತಿಯೊಬ್ಬರು ದೊಡ್ಡಕಲ್ಲಸಂದ್ರ ನಿಲ್ದಾಣದಲ್ಲಿ 17.45 ಗಂಟೆಗೆ ಸಮೀಪಿಸುತ್ತಿರುವ ರೈಲಿನ ಮುಂದೆ ಜಿಗಿದಿದ್ದಾರೆ. ಹಸಿರು ಮಾರ್ಗದಲ್ಲಿ ಯಲಚೇನಹಳ್ಳಿ ಮತ್ತು ಸಿಲ್ಕ್ ಇನ್ಸ್ಟಿಟ್ಯೂಟ್ ನಿಲ್ದಾಣಗಳ ನಡುವೆ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ, ಉಳಿದ ಮಾರ್ಗದಲ್ಲಿ ಸೇವೆಗಳು ಲಭ್ಯವಿದೆ.
— ನಮ್ಮ ಮೆಟ್ರೋ (@OfficialBMRCL) August 3, 2024