ಈಡಿ ಬಳಸಿ ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲ: ಸಚಿವ ಭೋಸರಾಜು
ಎನ್.ಎಸ್.ಭೋಸರಾಜು
ಬೆಂಗಳೂರು : ಜಾರಿ ನಿರ್ದೇಶನಾಲಯ (ಈಡಿ) ಅಥವಾ ಇನ್ಯಾವುದೇ ತನಿಖಾ ಸಂಸ್ಥೆಗಳು ಒತ್ತಡ ಹೇರಿದರು ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸು ಸಾಧ್ಯವಿಲ್ಲ ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಭೋಸರಾಜು ಹೇಳಿದ್ದಾರೆ.
ಗುರುವಾರ ಪ್ರಕಟಣೆ ನೀಡಿರುವ ಅವರು, ಜನರಿಂದ ಆಯ್ಕೆಯಾಗಿರುವ ಕಾಂಗ್ರೆಸ್ ಸರಕಾರವನ್ನು ಕೆಡವಲು ಕೇಂದ್ರ ಸರಕಾರ ಮತ್ತು ರಾಜ್ಯದ ಬಿಜೆಪಿ ನಾಯಕರು ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ, ಅಸಂವಿಧಾನಿಕವಾಗಿ, ಪ್ರಜಾಪ್ರಭುತ್ವದ ವಿರುದ್ಧವಾಗಿ, ಈ ನೆಲದ ಕಾನೂನುಗಳನ್ನು ಧಿಕ್ಕರಿಸಿ ಜನಪರ ಸರ್ಕಾರವನ್ನು ಬೀಳಿಸಲು ಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಆ ಹಿನ್ನೆಲೆಯಲ್ಲಿಯೇ ಜಾರಿ ನಿರ್ದೇಶನಾಲಯ, ಸಿಬಿಐ ಮುಂತಾದ ಸಾಂವಿಧಾನಿಕ ತನಿಖಾ ಸಂಸ್ಥೆಗಳನ್ನು ಪಂಜರದ ಹಕ್ಕಿಯನ್ನಾಗಿ ಮಾಡಿಕೊಂಡಿದ್ದಾರೆ. ತಮ್ಮ ಶತ್ರುಗಳನ್ನು ಮಟ್ಟ ಹಾಕಲು ಈ ಸಂಸ್ಥೆಗಳನ್ನು ಛೂ ಬಿಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಸಿಎಂ ಸಿದ್ದರಾಮಯ್ಯರ ಪಾತ್ರವೇ ಇಲ್ಲದ ಮುಡಾ ಪ್ರಕರಣವನ್ನು ಮುಂದಿಟ್ಟುಕೊಂಡು ರಾಜ್ಯ ಸರಕಾರ ಪತನಗೊಳಿಸಬೇಕು ಎಂದು ಬಿಜೆಪಿ ಶತಪ್ರಯತ್ನ ನಡೆಸುತ್ತಿದೆ. ಇದಕ್ಕಾಗಿ ಎಲ್ಲ ಅನ್ಯಾಯ ಮಾರ್ಗಗಳನ್ನು ಹಿಡಿದಿದೆ ಎಂದು ಟೀಕಿಸಿದ್ದಾರೆ.
‘ತನಿಖೆ ನಡೆಸಲು ಕೋರ್ಟ್ ಅನುಮತಿ ನೀಡಿರದಿದ್ದರೂ ಈಡಿ ಕಾನೂನು ಮೀರಿ ತನಿಖೆಗೆ ಮುಂದಾಗಿದೆ. ರಾಜ್ಯದ ತನಿಖಾ ಸಂಸ್ಥೆಯ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಒಂದೇ ವಿಷಯಕ್ಕೆ ಸಂಬಂಧಪಟ್ಟಂತೆ ಎರಡು ತನಿಖಾ ಏಜೆನ್ಸಿಗಳು ತನಿಖೆ ನಡೆಸಲು ಕಾನೂನಿನಲ್ಲಿ ಅವಕಾಶವಿಲ್ಲ. ಆದರೂ ಕಾನೂನಿನ ವಿರುದ್ಧವಾಗಿ ಈಡಿ ತನಿಖೆಗೆ ಮುಂದಾಗಿರುವುದು ಬಿಜೆಪಿಯ ಅಣತಿಯ ಮೇರೆಗೆ ಎಂಬ ಅನುಮಾನ ದಟ್ಟವಾಗುತ್ತದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಈಡಿ, ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿರುವುದು ವಿಪರ್ಯಾಸ. ಈಡಿ ಯಾವುದೇ ಒಂದು ತನಿಖೆಗೆ ಮುಂದಾದರೆ ಅದನ್ನು ಗೌಪ್ಯವಾಗಿಡುವುದು ನಿಯಮ. ಆದರೆ ಅದನ್ನು ಮೀರಿ ತನಿಖೆಯ ವಿಚಾರಗಳು ಬಹಿರಂಗವಾಗುತ್ತದೆ ಎಂದಾದರೆ ಅದರ ಹಿಂದೆ ದುರುದ್ದೇಶವಿದೆ ಎಂಬುದರಲ್ಲಿ ಅನುಮಾನವಿಲ್ಲ. ತನಿಖೆಯಲ್ಲಿ ಏನಾದರೂ ಸತ್ಯಾಂಶವಿದ್ದರೆ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ಆದರೆ ತನಿಖೆಯ ವಿಚಾರಗಳು ಮಾಧ್ಯಮಕ್ಕೆ ಸೋರಿಕೆಯಾಗಿವೆ ಎಂದಾದರೆ ಅದು ಇ.ಡಿಯ ವೈಫಲ್ಯ ಎಂದಾಗುವುದಿಲ್ಲವೇ? ಇ.ಡಿ ತನಿಖೆಯ ಬಗ್ಗೆ ಅನುಮಾನಗಳು ಏಳುವುದಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.