ದಕ್ಷಿಣ ಕನ್ನಡ-ಉಡುಪಿ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪರ ವಾತಾವರಣ : ಸಚಿವ ದಿನೇಶ್ ಗುಂಡೂರಾವ್
ಬೆಂಗಳೂರು: ಬಿಜೆಪಿ ತನ್ನ ಭದ್ರಕೋಟೆ ಎಂದು ಹೇಳಿಕೊಳ್ಳುವ ಕರಾವಳಿ ಭಾಗದಲ್ಲಿಯೂ ಈ ಬಾರಿ ಬಿಜೆಪಿ ಗೆಲ್ಲುವ ವಿಶ್ವಾಸ ಕಳೆದುಕೊಂಡಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಪರ ವಾತಾವರಣವಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ಶುಕ್ರವಾರ ಇಲ್ಲಿನ ಆರ್.ಟಿ.ನಗರದಲ್ಲಿ ಕುಟುಂಬ ಸಮೇತರಾಗಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯು ಬಿಜೆಪಿಗೆ ತೀವ್ರ ಪೈಪೋಟಿ ನೀಡಿದ್ದು ಗೆಲುವು ಸಾಧಿಸಿದರೂ ಅಚ್ಚರಿಯಿಲ್ಲ ಎಂದರು.
ಅದೇ ರೀತಿ, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲೂ ಕಾಂಗ್ರೆಸ್ ಅಭ್ಯರ್ಥಿ ಪರ ವಾತಾವರಣೆ ವ್ಯಕ್ತವಾಗಿದೆ. ಇಡೀ ರಾಜ್ಯದಲ್ಲಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ನಾವು ಕನಿಷ್ಠ 18 ರಿಂದ 20 ಸ್ಥಾನ ಗೆಲ್ಲುವ ವಿಶ್ವಾಸ ವ್ಯಕ್ತವಾಗಿದೆ. ಕಾಂಗ್ರೆಸ್ ಗೆಲ್ಲಲು ಅಸಾಧ್ಯ ಎನ್ನುವ ಕ್ಷೇತ್ರಗಳಲ್ಲೂ ಉತ್ತಮ ಪೈಪೋಟಿ ನೀಡಲಾಗಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಪ್ರಬಲ ಪೈಪೋಟಿ ನೀಡಿದ್ದಾರೆ. ಪ್ರಧಾನಿ ಮೋದಿ ಸಮಾಜ ಒಡೆಯುವ ಮಾತುಗಳನ್ನಾಡುತ್ತಿರುವುದೇ ಬಿಜೆಪಿ ಅಭ್ಯರ್ಥಿಗಳಿಗೆ ತಿರುಗುಬಾಣವಾಗಿದೆ ಎಂದು ಅವರು ಹೇಳಿದರು.
ನರೇಂದ್ರ ಮೋದಿ 10 ವರ್ಷಗಳ ತಮ್ಮ ಆಡಳಿತಾವಧಿಯಲ್ಲಿ ಮಾಡಿರುವ ಕೆಲಸಗಳ ಆಧಾರದ ಮೇಲೆ ಮತ ಕೇಳಬೇಕಿತ್ತು. ಆದರೆ, ಅದು ಪ್ರಧಾನಿಯಿಂದ ಆಗಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ನುಡಿದಂತೆ ನಡೆದಿದೆ. ಜನರು ಕಾಂಗ್ರೆಸ್ ಪಕ್ಷವನ್ನು ಹೆಚ್ಚು ಬೆಂಬಲಿಸುತ್ತಿರುವುದನ್ನು ನಾವು ಕಾಣುತ್ತಿದ್ದೇವೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.