‘ಮೂಡಿಗೆರೆ’ ಆನೆ ಕಾರಿಡಾರ್‌ನಲ್ಲಿ ವಾಹನ ರ್ಯಾಲಿ ʼ | ಪರಿಸರ ಹಾನಿ ಕುರಿತು ಪರಿಶೀಲಿಸಿ : ಸಚಿವ ಈಶ್ವರ್ ಖಂಡ್ರೆ
ಬೆಂಗಳೂರು : ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಸಮೀಪದ ಬೈರಾಪುರ ಹೊಸಕೆರೆಯ 9 ಗುಡ್ಡಗಳ ವ್ಯಾಪ್ತಿಯ ಆನೆ ಕಾರಿಡಾರ್ ನಲ್ಲಿ ವಾಹನ ರ್ಯಾಲಿ ನಡೆಸಲಾಗಿದ್ದು, ಅದರಿಂದ ಆಗಿರುವ ಪರಿಸರ ಹಾನಿಯ ಕುರಿತು ಪರಿಶೀಲನೆ ನಡೆಸಿ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ, ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರವಿವಾರ ಈ ಕುರಿತು ಪ್ರಕಟನೆ ನೀಡಿರುವ ಅವರು, ‘ಈ ರ್ಯಾಲಿಯಲ್ಲಿ ಸುಮಾರು 52 ವಾಹನಗಳು ಭಾಗಿಯಾಗಿದ್ದವು ಎಂಬ ಮಾಹಿತಿ ಲಭ್ಯವಾಗಿದ್ದು, ಈ ಕುರಿತು ಪರಿಶೀಲನೆ ನಡೆಸಿ, ಅರಣ್ಯದೊಳಗೆ ರ್ಯಾಲಿ ನಡೆದಿದ್ದಲ್ಲಿ ಅರಣ್ಯ ಸಂರಕ್ಷಣಾ ಕಾಯ್ದೆ ಮತ್ತು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ತುರ್ತು ಕ್ರಮವಹಿಸಿ’ ಎಂದು ಸೂಚಿಸಿದ್ದಾರೆ.
‘ಪಶ್ಚಿಮಘಟ್ಟ ಮತ್ತು ಅರಣ್ಯಗಳು ಮೋಜು-ಮಸ್ತಿಯ ತಾಣಗಳಲ್ಲ. ಈ ಪ್ರದೇಶದಲ್ಲಿ ನೂರಾರು ಪ್ರಭೇದದ ಪ್ರಾಣಿ, ಪಕ್ಷಿ, ಸಸ್ಯ ಸಂಕುಲಗಳಿವೆ. ಇವುಗಳ ಸಂರಕ್ಷಣೆಯ ಹೊಣೆ ಅರಣ್ಯ ಇಲಾಖೆಯ ಮೇಲಿದೆ. ಆದರೆ ಆನೆ ಕಾರಿಡಾರ್ ನಲ್ಲಿ ವಾಹನ ರ್ಯಾಲಿ ನಡೆಸಲಾಗಿರುವ ಬಗ್ಗೆ ಮಾದ್ಯಮಗಳಲ್ಲಿ ಸುದ್ದಿ ಪ್ರಕಟವಾಗಿದ್ದು, ಈ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಅವರು ತಿಳಿಸಿದ್ದಾರೆ.