ʼಜನರ ಕೆಲಸ ಮಾಡಲು ಮಾತ್ರ ಚುನಾವಣೆ ಅಡ್ಡ ಬರುತ್ತದೆಯೇ?ʼ | ಉಪ ವಿಭಾಗಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ಕೃಷ್ಣ ಬೈರೇಗೌಡ
ಬೆಂಗಳೂರು: ಹಣ ಮಾಡಲು ಯಾವುದೇ ಚುನಾವಣೆ ಅಡ್ಡ ಬರುವುದಿಲ್ಲ, ಆದರೆ ಜನರ ಕೆಲಸ ಮಾಡಲು ಮಾತ್ರ ಚುನಾವಣೆ ಅಡ್ಡ ಬರುತ್ತದೆಯೇ? ಕೋರ್ಟ್ನಲ್ಲಿ ಬಾಕಿ ಇರುವ ತಕರಾರು ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಅಂದ್ರೆ ಚುನಾವಣೆ ಕೆಲಸ ಇತ್ತು ಎಂದೂ ಸಾಬೂಬು ಹೇಳ್ತೀರಾ? ಎಂದು ಉಪ ವಿಭಾಗಾಧಿಕಾರಿಗಳನ್ನು (ಎಸಿ) ಕಂದಾಯ ಸಚಿವ ಕೃಷ್ಣ ಬೈರೇಗೌಡ ತರಾಟೆಗೆ ತೆಗೆದುಕೊಂಡರು.
ಎಸಿ ನ್ಯಾಯಾಲಯಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ತಕರಾರು ಪ್ರಕರಣಗಳನ್ನು ಇತ್ಯರ್ಥಗೊಳಿಸದೆ ಬಾಕಿ ಉಳಿಸಿಕೊಂಡಿರುವ ಮಂಡ್ಯ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ತುಮಕೂರು, ಕೊಪ್ಪಳ, ಮೈಸೂರು, ಮಂಗಳೂರು ಹಾಗೂ ಬೆಳಗಾವಿ ಜಿಲ್ಲೆಗಳ ಆಯ್ದ 30 ಉಪ-ವಿಭಾಗಾಧಿಕಾರಿಗಳು ಹಾಗೂ ವಲಯ ಆಯುಕ್ತರ ಜೊತೆ ಶುಕ್ರವಾರ ವಿಕಾಸಸೌಧದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಸಭೆ ನಡೆಸಿದರು.
ಈ ವೇಳೆ ಉಪ-ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಬಾಕಿ ಇರುವ ತಕರಾರು ಪ್ರಕರಣಗಳ ಇತ್ಯರ್ಥಕ್ಕೆ ಮುಂದಾಗದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕೃಷ್ಣ ಬೈರೇಗೌಡ, ಹಲವು ವರ್ಷಗಳಿಂದ ಎಸಿ ನ್ಯಾಯಾಲಯಗಳಿಗೆ ಅಲೆದಾಡಿ ಜನ ಬಸವಳಿಸಿದ್ದಾರೆ. ಹೀಗಾಗಿ ಬಾಕಿ ಇರುವ ಎಲ್ಲ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಬೇಕು ಎಂದು ಕಳೆದ ಒಂದು ವರ್ಷದಿಂದ ರಾಜ್ಯಾದ್ಯಂತ ಓಡಾಡಿ ಸಭೆ ನಡೆಸಿ ಎಲ್ಲ ಅಧಿಕಾರಿಗಳಿಗೂ ಗುರಿ ನಿಗದಿ ಮಾಡಲಾಗಿದೆ. ಆದರೆ, ಕಳೆದ ಮಾರ್ಚ್ನಿಂದ ಪ್ರಕರಣ ವಿಲೇವಾರಿ ಕೆಲಸ ಮತ್ತೆ ನಿಂತ ನೀರಾಗಿದೆ ಎಂದ ತೀವ್ರ ಅಸಮಾಧಾನ ಹೊರಹಾಕಿದರು.
ಮಾರ್ಚ್ ತಿಂಗಳವರೆಗೆ ಎಸಿ ನ್ಯಾಯಾಲಯಗಳಲ್ಲಿ ತಕರಾರು ಪ್ರಕರಣಗಳ ವಿಲೇವಾರಿ ವೇಗವಾಗಿಯೇ ಇತ್ತು. ಆದರೆ, ತದನಂತರ ಈ ವೇಗ ಇಳಿಮುಖವಾಗಿ ಅಧಿಕಾರಿಗಳು ಮತ್ತೆ ಹಳೆಯ ರೀತಿಯೆ ವರ್ತಿಸುತ್ತಿದ್ದಾರೆ. ಯಾಕೆ ಹೀಗೆ? ಎಂದು ಪ್ರಶ್ನಿಸಿದರೆ ಚುನಾವಣೆ ನೆಪ ಹೇಳುತ್ತಾರೆ. ಇವರಿಗೆ ದುಡ್ಡು ಮಾಡೋಕೆ ಚುನಾವಣೆ ಅಡ್ಡ ಬರಲ್ಲ, ಆದರೆ ಜನಪರ ಕೆಲಸ ಮಾಡೋಕೆ ಮಾತ್ರ ಚುನಾವಣೆ ಅಡ್ಡ ಬರುತ್ತಾ? ಎಂದು ಅವರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ರಾಜ್ಯಾದ್ಯಂತ ಎಸಿ ನ್ಯಾಯಾಲಯಗಳಲ್ಲಿ ಒಟ್ಟಾರೆ 36,430 ಪ್ರಕರಣಗಳು ಬಾಕಿ ಇವೆ. ಈ ಪೈಕಿ ಅತ್ಯಧಿಕ ಬೆಂಗಳೂರು ಉತ್ತರ ವಲಯದಲ್ಲಿ 5419 ಹಾಗೂ ಬೆಂ.ದಕ್ಷಿಣ ವಲಯದಲ್ಲಿ 4351 ಪ್ರಕರಣಗಳು ಬಾಕಿ ಇವೆ. ಅಲ್ಲದೆ, ಈ ಎರಡೂ ವಿಭಾಗದಲ್ಲಿ ಅಧಿಕಾರಿಗಳು ಶೇ.65ಕ್ಕಿಂತ ಹೆಚ್ಚು ತನ್ನ ಕಾರ್ಯಕ್ಷೇತ್ರದ (ಜ್ಯೂರಿ ಸೆಕ್ಷನ್) ಹೊರಗಿನ ಪ್ರಕರಣಗಳನ್ನೂ ದಾಖಲಿಸಿಕೊಂಡಿದ್ದಾರೆ. ಪ್ರಕರಣಗಳ ಇತ್ಯರ್ಥವೂ ಆಮೆ ಗತಿಯಲ್ಲಿ ಸಾಗಿದೆ. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಕೃಷ್ಣ ಬೈರೇಗೌಡ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಬೆಂ.ಉತ್ತರ ವಿಭಾಗಾಧಿಕಾರಿ ಪ್ರಮೋದ್ ಪಾಟೀಲ್ ಹಾಗೂ ಬೆಂ.ದಕ್ಷಿಣ ವಿಭಾಗಾಧಿಕಾರಿ ರಜನೀಕಾಂತ್ ಚೌಹ್ಹಾಣ್ ವಿರುದ್ಧ ಆಕ್ರೋಶ ಹೊರಹಾಕಿದ ಅವರು, ನಿಮ್ಮ ಕಾರ್ಯಕ್ಷೇತ್ರದ ಹೊರಗಿನ ಪ್ರಕರಣಗಳನ್ನೂ ಕಾನೂನು ಬಾಹಿರವಾಗಿ ದಾಖಲಿಸಿಕೊಂಡಿದ್ದೀರ. ಹೀಗೆ ಮಾಡಲು ಎಷ್ಟು ಹಣ ತೆಗೆದುಕೊಂಡಿರಿ ಎಂದು ಖಾರವಾಗಿ ಪ್ರಶ್ನಿಸಿದರು. ಅಲ್ಲದೆ, ನಾವು ಒಳ್ಳೆಯ ಮಾತಿನಿಂದ ಹೇಳಿದರೆ ನಿಮ್ಮ ತಲೆಗೆ ಹೋಗೋದೆ ಇಲ್ಲ, ನಿಮಗೆ ನಿಮ್ಮ ಭಾಷೆಯಲ್ಲೇ ಉತ್ತರ ನೀಡಬೇಕು ಎಂದು ಎಚ್ಚರಿಸಿದರು.
ಇನ್ನೂ ತುಮಕೂರು ಜಿಲ್ಲೆಯ ಎಸಿ ಕೋರ್ಟ್ನಲ್ಲಿ ಕಳೆದ ಮಾರ್ಚ್ನಲ್ಲಿ 1373 ಪ್ರಕರಣಗಳು ದಾಖಲಾಗಿದ್ದರೆ, ಮಧುಗಿರಿಯಲ್ಲಿ 898 ಪ್ರಕರಣಗಳು ದಾಖಲಾಗಿದೆ. ಆದರೆ, ಇಷ್ಟೂ ಪ್ರಕರಣಗಳ ಪೈಕಿ ಕಳೆದ ಐದು ತಿಂಗಳಿನಿಂದ ಯಾವೊಂದು ಪ್ರಕರಣದಲ್ಲೂ ಮಧುಗಿರಿ ಉಪ-ವಿಭಾಗಾಧಿಕಾರಿ ಶಿವಪ್ಪ ಹಾಗೂ ತುಮಕೂರು ಉಪ-ವಿಭಾಗಾಧಿಕಾರಿ ಗೌರವ್ ಶೆಟ್ಟಿ ಯಾವುದೇ ಕ್ರಮ ಜರಿಗಿಸಿಲ್ಲ. ಇವರ ವಿರುದ್ಧವೂ ಸಭೆಯಲ್ಲಿ ಕೃಷ್ಣ ಬೈರೇಗೌಡ ತೀವ್ರ ಅಸಮಾಧಾನ ಹೊರಹಾಕಿದರು.
ಅಲ್ಲದೆ, ಎಸಿ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಮುಂದಾಗದ ಅಧಿಕಾರಿಗಳಿಗೆ ನೋಟೀಸ್ ಜಾರಿಗೊಳಿಸಿ ಕಠಿಣ ಕ್ರಮ ಜರುಗಿಸುವಂತೆಯೂ ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಅವರಿಗೆ ಕೃಷ್ಣ ಬೈರೇಗೌಡ ಸೂಚಿಸಿದರು.
ಸಭೆಯಲ್ಲಿ ಇಲಾಖೆ ಕಂದಾಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಕಂದಾಯ ಆಯುಕ್ತ ಸುನೀಲ್ ಕುಮಾರ್, ಪ್ರಾದೇಶಿಕ ಆಯುಕ್ತ ಆದಿತ್ಯ ಬಿಸ್ವಾಸ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.