ಉಚಿತ ನೀಟ್, ಜೆಇಇ, ಸಿಇಟಿ ಕೋಚಿಂಗ್ಗೆ ಸಚಿವ ಮಧು ಬಂಗಾರಪ್ಪ ಚಾಲನೆ
ಮಧು ಬಂಗಾರಪ್ಪ
ಬೆಂಗಳೂರು : ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ‘ಉಚಿತ ನೀಟ್, ಜೆಇಇ, ಸಿಇಟಿ ಆನ್ಲೈನ್ ಕೋಚಿಂಗ್ ತರಗತಿಗಳ ತರಬೇತಿ ಯೋಜನೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ನಡೆದ ವಿದ್ಯಾರ್ಥಿಗಳೊಂದಿಗಿನ ಸಂವಾದದಲ್ಲಿ ಯೋಜನೆಗೆ ಚಾಲನೆಗೊಳಿಸಿದ ಬಳಿಕ ಮಾತನಾಡಿದ ಅವರು, ದೇಶದಲ್ಲೇ ಮೊದಲ ಬಾರಿಗೆ ನಮ್ಮ ರಾಜ್ಯದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ನೀಟ್/ಜೆಇಇ/ಸಿಇಟಿ ಆನ್ಲೈನ್ ಕೋಚಿಂಗ್ ತರಗತಿಗಳ ತರಬೇತಿ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದರು.
25 ಸಾವಿರ ವಿದ್ಯಾರ್ಥಿಗಳು ಈ ತರಬೇತಿ ಪಡೆಯಲಿದ್ದು, ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಲಾಗಿನ್ ಐಡಿ ನೀಡಲಾಗಿದೆ. ಆಸಕ್ತ ಎಲ್ಲಾ ವಿದ್ಯಾರ್ಥಿಗಳು ಸಹ ಆನ್ಲೈನ್ ಉಚಿತ ತರಬೇತಿ ಪಡೆಯಬಹುದು ಎಂದು ಮಧು ಬಂಗಾರಪ್ಪ ಹೇಳಿದರು.
ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣ ಶೈಕ್ಷಣಿಕ ಜೀವನದ ಬಹಳ ಪ್ರಮುಖವಾದ ಹಂತವಾಗಿದ್ದು, ಭವಿಷ್ಯದ ವೃತ್ತಿ ಆಯ್ಕೆಗೆ ಪೂರಕವಾದ ಶಿಕ್ಷಣ ಆಯ್ಕೆ ಮಾಡಲು ‘ನೀಟ್/ಜೆಇಇ/ಸಿಇಟಿ’ ಪರೀಕ್ಷೆಗಳಲ್ಲಿ ಉತ್ತಮ ಶ್ರೇಣಿ ಪಡೆಯುವುದು ಮುಖ್ಯವಾಗಿರುತ್ತದೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ಹೆಚ್ಚಿನ ಪೋಷಕರು ಖಾಸಗಿ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ದಾಖಲು ಮಾಡುತ್ತಾರೆ. ಅಲ್ಲಿ ನಿಗದಿತ ತರಗತಿ ಚಟುವಟಿಕೆಗಳೊಂದಿಗೆ ವೃತ್ತಿಪರ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ನೀಟ್/ಜೆಇಇ/ಸಿಇಟಿ ಪ್ರವೇಶ ಪರೀಕ್ಷೆಗೂ ಸಹ ತರಬೇತಿ ನಡೆಸಲಾಗುತ್ತದೆ ಎಂಬುದು ಅದಕ್ಕೆ ಕಾರಣ ಎಂದು ಮಧು ಬಂಗಾರಪ್ಪ ಹೇಳಿದರು.
ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿಜ್ಞಾನ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೂ ನೀಟ್/ಜೆಇಇ/ಸಿಇಟಿ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ಸಿಗಬೇಕು ಎಂಬುದು ನಮ್ಮ ಸರಕಾರದ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಸರಕಾರಿ ಪಿಯು ಕಾಲೇಜುಗಳ ವಿಜ್ಞಾನ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಉನ್ನತ ಶಿಕ್ಷಣ ಕೋರ್ಸ್ಗಳ ಪ್ರವೇಶ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿಯನ್ನು ಉಚಿತವಾಗಿ ನೀಡಲು ಬಜೆಟ್ನಲ್ಲಿ ಘೋಷಣೆ ಮಾಡಲಾಗಿತ್ತು ಎಂದು ಮಧು ಬಂಗಾರಪ್ಪ ತಿಳಿಸಿದರು.
ಈ ಯೋಜನೆಯಡಿಯಲ್ಲಿ ರಾಜ್ಯದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ಸಂಯೋಜನೆಯಲ್ಲಿರುವ 25 ಸಾವಿರ ವಿದ್ಯಾರ್ಥಿಗಳ ಪೈಕಿ, ಆದರ್ಶ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಥಮ ಪಿಯುಸಿಯ 5 ಸಾವಿರ, ಇತರೆ ಕಾಲೇಜುಗಳ ಪ್ರಥಮ ಪಿಯುಸಿಯ 10 ಸಾವಿರ ಹಾಗೂ ದ್ವಿತೀಯ ಪಿಯುಸಿಯ 10 ಸಾವಿರ ವಿದ್ಯಾರ್ಥಿಗಳು ಇದರ ಲಾಭವನ್ನು ಪಡೆಯಲಿದ್ದಾರೆ ಎಂದು ಮಧು ಬಂಗಾರಪ್ಪ ಹೇಳಿದರು.
ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡುವ ಕಾರ್ಯಕ್ಕೆ ಈ ಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡಿರುವ ಪೇಸ್ ಸಂಸ್ಥೆ ಆಯ್ಕೆಯಾಗಿರುತ್ತದೆ. ಈ ಸಂಸ್ಥೆಯಿಂದ ಮುಂದಿನ ಎರಡು ವರ್ಷಗಳಿಗೆ ಪುಸ್ತಕ ಹಾಗೂ ಮುಂದಿನ ವರ್ಷದಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ‘ನೀಟ್/ಜೆಇಇ/ಸಿಇಟಿ’ ಆನ್ಲೈನ್ ಕೋಚಿಂಗ್ ತರಗತಿಗಳನ್ನು ನಡೆಸುತ್ತಾರೆ ಎಂದು ಮಧು ಬಂಗಾರಪ್ಪ ತಿಳಿಸಿದರು.
ತರಬೇತಿಯು ತರಗತಿಗಳ ಆರಂಭಕ್ಕೆ ಮುನ್ನ ಒಂದು ಗಂಟೆ, ತರಗತಿಗಳು ಮುಗಿದ ನಂತರ ಒಂದು ಗಂಟೆ ಅವಧಿಯಲ್ಲಿ ತರಬೇತಿಗಳು ನಡೆಯುತ್ತವೆ. ಪರಿಣಿತ ಉಪನ್ಯಾಸಕರಿಂದ ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ತರಬೇತಿ ನೀಡಲಾಗುವುದು. ಈ ವಿಶೇಷ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಹಾಜರಾತಿ ಆ್ಯಪ್ ತೆಗೆದುಕೊಳ್ಳಲಾಗುತ್ತದೆ. ನೊಂದಾಯಿತ 25 ಸಾವಿರ ವಿದ್ಯಾರ್ಥಿಗಳಿಗೆ ಕಿರುಪರೀಕ್ಷೆಗಳನ್ನು ನಡೆಸಿ ಅಂಕಗಳನ್ನು ನೀಡಲಾಗುತ್ತದೆ ಹಾಗೂ ರ್ಯಾಂಕ್ ಪಟ್ಟಿ ಮಾಡಿ ಜಿಲ್ಲಾವಾರು ಹಾಗೂ ರಾಜ್ಯ ಹಂತದಲ್ಲಿ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಮಧು ಬಂಗಾರಪ್ಪ ಹೇಳಿದರು.
ಪ್ರತಿ ಶನಿವಾರ ಸಂದೇಹ ಪರಿಹಾರಾತ್ಮಕ ಅವಧಿಗಳನ್ನು ನಡೆಸಲಾಗುವುದು. ಸೋಮವಾರದಿಂದ ಶುಕ್ರವಾರದವರೆಗಿನ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಬರುವ ಸಂದೇಹಗಳನ್ನು ಆಯಾ ವಿಷಯ ಉಪನ್ಯಾಸಕರು ಸಂಗ್ರಹಿಸಿ ಸಂಸ್ಥೆಯ ಪೋರ್ಟಲ್ ಮೂಲಕ ಕಳುಹಿಸುವರು. ಆ ಸಂದೇಹಗಳನ್ನು ಪರಿಗಣಿಸಿ ವಿಷಯ ತಜ್ಞರು ಪರಿಹಾರ ನೀಡುತ್ತಾರೆ. ಮುಂದಿನ ವರ್ಷದಲ್ಲಿ ರಾಜ್ಯ ಮಟ್ಟದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ವಿಸ್ತರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಮಧು ಬಂಗಾರಪ್ಪ ತಿಳಿಸಿದರು.
ಪೇಸ್ ಸಂಸ್ಥೆಯ ನಿರ್ದೇಶಕ ಪ್ರವೀಣ್ ತ್ಯಾಗಿ ಕಾರ್ಯಕ್ರಮದ ಪರಿಚಯ ಹಾಗೂ ಕಿರುಚಿತ್ರ ಪ್ರಾತ್ಯಕ್ಷತೆ ವಿವರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಶಾಲಾ ಶಿಕ್ಷಣ ಇಲಾಖೆಯ (ಪದವಿ ಪೂರ್ವ) ನಿರ್ದೇಶಕಿ ಸಿಂಧೂ ಬಿ.ರೂಪೇಶ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.