ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ | ರಾಜ್ಯವ್ಯಾಪಿ ಮಾನವ ಸರಪಳಿ : ಸಚಿವ ಮಹದೇವಪ್ಪ
ಬೆಂಗಳೂರು : ಮುಂದಿನ ಸೆ.15ರಂದು ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆ ಬೀದರ್ ನಿಂದ ಚಾಮರಾಜನಗರದ ವರೆಗೆ ಹಮ್ಮಿಕೊಂಡಿರುವ ಮಾನವ ಸರಪಳಿ ಯಶಸ್ವಿಗೊಳಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ.
ಗುರುವಾರ ವಿಧಾನಸೌಧದಲ್ಲಿನ ಸಮಿತಿ ಕೊಠಡಿಯಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಹಿನ್ನೆಲೆ ನಡೆದ ಸಭೆ ಬಳಿಕ ಮಾತನಾಡಿದ ಅವರು, ಬೀದರ್ ನಿಂದ ಚಾಮರಾಜನಗರದ ವರೆಗೆ ಮಾನವ ಸರಪಳಿ ಮೂಲಕ ಆಚರಿಸಲ್ಪಡುವ ಈ ಪ್ರಜಾಪ್ರಭುತ್ವದ ದಿನದಲ್ಲಿ ರಾಜ್ಯದ ವಿದ್ಯಾರ್ಥಿ ಸಮೂಹ, ಸಂಘಟನೆಗಳು ಮತ್ತು ಜನ ಸಾಮಾನ್ಯರು ಭಾಗವಹಿಸಬೇಕು ಎಂದರು.
ಇಂತಹ ಮಹತ್ತರವಾದ ಕಾರ್ಯಕ್ರಮವು ಯಶಸ್ವಿಯಾಗಲು ಜಿಲ್ಲಾ ಮಟ್ಟದ ಅಧಿಕಾರಿಗಳು ಜವಾಬ್ದಾರಿ ಹೊರಲಿದ್ದು, ಸ್ಥಳೀಯ ಮತ್ತು ನಗರ ಪಂಚಾಯಿತಿಗಳು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಲಿವೆ. ಇದೇ ವೇಳೆ ಮಾನವ ಸರಪಳಿಯ ನಂತರದಲ್ಲಿ ಮಕ್ಕಳಿಂದ ಪ್ರಜಾಪ್ರಭುತ್ವ ದಿನಾಚರಣೆಯ ನೆನಪಲ್ಲಿ ಒಂದೊಂದು ಗಿಡ ನೆಡುವ ಪ್ರಸ್ತಾಪದ ಬಗ್ಗೆ ಚರ್ಚೆ ಮಾಡಲಾಯಿತು ಎಂದು ಮಾಹಿತಿ ನೀಡಿದರು.
ಈ ದಿನದಂದು ಹಲವು ಖಾಸಗೀ ಸಂಸ್ಥೆಗಳು ಪಾಲ್ಗೊಳ್ಳಲಿದ್ದು, ಮತದಾನ ಹಾಗೂ ಇನ್ನಿತರೆ ಮಹತ್ವದ ಸಂಗತಿಗಳ ಕುರಿತು ಅರಿವು ಮೂಡಿಸಲು ಚುನಾವಣಾ ಆಯೋಗವನ್ನೂ ಸಹ ಸಂಪರ್ಕಿಸುವ ಕುರಿತು ಚರ್ಚಿಸಲಾಯಿತು ಎಂದು ಉಲ್ಲೇಖಿಸಿದರು. ಈ ಸಂದರ್ಭದಲ್ಲಿ ಸಚಿವರಾದ ರಹೀಂ ಖಾನ್, ಮಧು ಬಂಗಾರಪ್ಪ ಸೇರಿದಂತೆ ಇಲಾಖೆಯ ಅಧಿಕಾರಿಗಳಿದ್ದರು.