ಲಂಚಕ್ಕೆ ಬೇಡಿಕೆ, ಜೀವ ಬೆದರಿಕೆ, ಜಾತಿ ನಿಂದನೆ ಪ್ರಕರಣ : ಬಿಜೆಪಿ ಶಾಸಕ ಮುನಿರತ್ನ 2 ದಿನ ಪೊಲೀಸ್ ಕಸ್ಟಡಿಗೆ
ಬೆಂಗಳೂರು : ಜೀವ ಬೆದರಿಕೆ, ಲಂಚಕ್ಕೆ ಬೇಡಿಕೆ, ಜಾತಿ ನಿಂದನೆ ಹಾಗೂ ಮಹಿಳೆಯರ ಅವಹೇಳನ ಆರೋಪ ಪ್ರಕರಣದಲ್ಲಿ ಬಂಧಿತರಾಗಿರುವ ಬಿಜೆಪಿ ಶಾಸಕ ಮುನಿರತ್ನ ಅವರನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಿ ಜನಪ್ರತಿನಿಧಿಗಳ ನ್ಯಾಯಾಲಯ ರವಿವಾರ ಆದೇಶಿಸಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಗ್ರಾಮದ ಬಳಿ ಶನಿವಾರ ಸಂಜೆ ಶಾಸಕ ಮುನಿರತ್ನ ಅವರನ್ನು ನಗರದ ವೈಯಾಲಿಕಾವಲ್ ಠಾಣೆ ಪೊಲೀಸರು ಬಂಧಿಸಿದ್ದರು. ಅವರಿಗೆ ಆರೋಗ್ಯ ತಪಾಸಣೆ ನಡೆಸಿ, ರವಿವಾರ ಬೆಳಗಿನ ಜಾವ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು.
ಶನಿವಾರ ರಾತ್ರಿ ಶಾಸಕ ಮುನಿರತ್ನ ಅವರನ್ನು ಅಶೋಕನಗರ ಠಾಣೆಗೆ ಕರೆತಂದು ಶೇಷಾದ್ರಿಪುರಂ ಉಪ ವಿಭಾಗದ ಎಸಿಪಿ ಪ್ರಕಾಶ್ ನೇತೃತ್ವದಲ್ಲಿ ಸುಮಾರು ಒಂದು ಗಂಟೆ ಕಾಲ ಪೊಲೀಸರು ವಿಚಾರಣೆಗೊಳಪಡಿಸಿದ್ದರು.
ಪ್ರಕರಣದ ವಿವರ: ಬಿಬಿಎಂಪಿ ಗುತ್ತಿಗೆದಾರ ಚಲುವರಾಜು ಎಂಬವರಿಗೆ ಸೆ.9ರಂದು 30ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟು, ಜೀವ ಬೆದರಿಕೆ ಹಾಕಿರುವ ಆರೋಪದ ಮೇಲೆ ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ, ಸರಕಾರಿ ಅಧಿಕಾರಿ ವಿಜಯ್‍ಕುಮಾರ್, ಕಾರ್ಯದರ್ಶಿ ಅಭಿಷೇಕ್ ಹಾಗೂ ಶಾಸಕರ ಆಪ್ತ ವಸಂತಕುಮಾರ್ ಎಂಬುವರ ವಿರುದ್ಧ ನಗರದ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಲ್ಲದೆ, ಪಾಲಿಕೆ ಸದಸ್ಯ ವೇಲುನಾಯಕ್ ಎಂಬುವರು ನೀಡಿದ ದೂರಿನನ್ವಯ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಶಾಸಕ ಮುನಿರತ್ನ ವಿರುದ್ಧ ಜಾತಿನಿಂದನೆ ಆರೋಪದಡಿ ಮತ್ತೊಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣಗಳ ಸಂಬಂಧ ಶಾಸಕ ಮುನಿರತ್ನ ಅವರನ್ನು ಕೋಲಾರದ ನಂಗಲಿ ಗ್ರಾಮದ ಬಳಿ ಶನಿವಾರ ಬಂಧಿಸಲಾಗಿತ್ತು.