ಸಂವಿಧಾನ ಬದಲಾಯಿಸಬೇಕೆನ್ನುವ ಪೇಜಾವರ ಶ್ರೀ ಮನವಿ ಆತಂಕಕಾರಿ : ಬಿ.ಕೆ.ಹರಿಪ್ರಸಾದ್
ಬಿ.ಕೆ.ಹರಿಪ್ರಸಾದ್
ಬೆಂಗಳೂರು : ಸಂವಿಧಾನ ಬದಲಾವಣೆ ಮಾಡಬೇಕೆಂದು ಕೋರಿ ಸಂಘಪರಿವಾರದ ನಿಷ್ಠೆಯ ಸ್ವಾಮೀಜಿ ಪೇಜಾವರ ಶ್ರೀ ರಾಜ್ಯಪಾಲರಿಗೆ ಮನವಿ ಸಲ್ಲಿಕೆ ಮಾಡಿರುವುದು ಆತಂಕಕಾರಿ ಎಂದು ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜ ಸುಧಾರಕರ ಆಶಯಗಳು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಪರಿಶ್ರಮದಿಂದ ರಚಿತವಾಗಿರುವ ಸರ್ವ ಧರ್ಮ, ಸಹಬಾಳ್ವೆ ತಿರುಳಿರುವ ಸಂವಿಧಾನವನ್ನು ಬದಲಾವಣೆಗೆ ಪೇಜಾವರ ಶ್ರೀಗಳು ಒತ್ತಾಯಿಸಿದ್ದಾರೆ. ಇದು ಸಂವಿಧಾನ ವಿರೋಧಿ ಎಂದು ಹೇಳಿದರು.
ನೂರಾರು ಕೋಟಿ ಜನಸಂಖ್ಯೆಯ ಭಾರತದಲ್ಲಿ ಪ್ರತಿಯೊಬ್ಬರು ಸ್ವಾಭಿಮಾನದಿಂದ ಬದುಕಲು ಸಂವಿಧಾನ ಅವಕಾಶ ನೀಡಿದೆ. ಇದರ ಬದಲಾಗಿ ಪೇಜಾವರ ಶ್ರೀ ಯಾವ ವ್ಯವಸ್ಥೆಯನ್ನು ಬಯಸುತ್ತಿದ್ದಾರೆ? ದಲಿತರು-ಶೂದ್ರರು ಶ್ರೇಷ್ಟತೆಯ ವ್ಯಸನಕ್ಕೆ ತಲೆಬಾಗಬೇಕೇ? ಮಹಿಳೆಯರು ಅತ್ಯಾಚಾರಿಗಳನ್ನು ಆರಾಧಿಸಬೇಕೆನ್ನುವ ವ್ಯವಸ್ಥೆ ಇರಬೇಕೆ? ಜೀತದಾರರು, ಶ್ರಮಿಕ ವರ್ಗ ಮಾಲೀಕರ ಅಡಿಯಾಳಾಗಿರಬೇಕೇ? ಎಂದು ಶ್ರೀಗಳಿಗೆ ಅವರು ಪ್ರಶ್ನಿಸಿದ್ದಾರೆ.
ಸಂವಿಧಾನದ ಬದಲಾಗಿ ಮನುಸ್ಮೃತಿ ಜಾರಿ ಮಾಡಲು ಹೊರಟಿರುವ ಸಂಘ ಪರಿವಾರದ ಹಿಡನ್ ಅಜೆಂಡವನ್ನೇ ಪೇಜಾವರರು ಮುಂದುವರೆಸುತ್ತಿದ್ದಾರೆ. ದಲಿತ, ಹಿಂದುಳಿದ, ಶೋಷಿತ ಸಮುದಾಯಗಳು ಸೇರಿದಂತೆ ಭಾರತದ ಪ್ರತಿಯೊಬ್ಬ ಪ್ರಜೆಯೂ ಸ್ವಾಭಿಮಾನ-ಘನತೆಯಿಂದ ಬದುಕುಬೇಕಾದ ವ್ಯವಸ್ಥೆ ಇರುವುದು ಸಂವಿಧಾನದಡಿಯಲ್ಲಿ ಮಾತ್ರ ಎಂದು ಅವರು ಹೇಳಿದರು.