ಮುಡಾ ಪ್ರಕರಣ : 11 ಸಾವಿರ ಪುಟಗಳ ಅಂತಿಮ ತನಿಖೆ ವರದಿ ನ್ಯಾಯಾಲಯಕ್ಕೆ ಸಲ್ಲಿಕೆ

ಸಾಂದರ್ಭಿಕ ಚಿತ್ರ
ಬೆಂಗಳೂರು : ಮುಡಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಲೋಕಾಯುಕ್ತ ಪೊಲೀಸರು ಒಟ್ಟು 11 ಸಾವಿರ ಪುಟಗಳ ತನಿಖೆಯ ಅಂತಿಮ ವರದಿಯನ್ನು ಸಲ್ಲಿಕೆ ಮಾಡಿದ್ದಾರೆ.
ಗುರುವಾರ ತನಿಖಾಧಿಕಾರಿ ಉದೇಶ್ ಅವರು ಜನಪ್ರತಿನಿಧಿಗಳ ಕೋರ್ಟ್ನ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರಿಗೆ ಸುಮಾರು 11 ಸಾವಿರ ಪುಟಗಳ ತನಿಖಾ ವರದಿಯನ್ನು ಸಲ್ಲಿಕೆ ಮಾಡಿದರು.
ಇನ್ನೂ, ನಿನ್ನೆಷ್ಟೇ ಮೈಸೂರಿನ ಸಾಮಾಜಿಕ ಕಾರ್ಯಕರ್ತ, ದೂರುದಾರ ಸ್ನೇಹಮಯಿ ಕೃಷ್ಣ ಅವರಿಗೆ ಆಕ್ಷೇಪಣೆಗಳು ಇದ್ದಲ್ಲಿ ಕೋರ್ಟಿಗೆ ಸಲ್ಲಿಸಿ ಎಂದು ಲೋಕಾಯುಕ್ತ ಪೊಲೀಸರು ನೋಟಿಸ್ ನೀಡಿದ್ದರು. ತನಿಖಾ ವರದಿಯಲ್ಲಿ ಈ ಹಗರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆ ಇದೆ ಎಂದು ಉಲ್ಲೇಖಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಬಾವಮೈದುನ ಮಲ್ಲಿಕಾರ್ಜುನ ಹಾಗೂ ದೇವರಾಜುಗೆ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿತ್ತು.
ಮತ್ತೊಂದೆಡೆ, ದೇವರಾಜುಗೆ ಸಂಬಂಧಿಸಿದಂತೆ ಡಿನೋಟಿಫೈ ಪ್ರಕ್ರಿಯೆಯಲ್ಲಿ ಕೆಲ ತಪ್ಪುಗಳಾಗಿವೆ. ದೇವರಾಜು ಜೀವನಕ್ಕೆ ಒಂದೇ ಜಮೀನು ಇರೋದು ಎಂದು ಹೇಳಿಕೊಂಡಿದ್ದರು. ಹೀಗಾಗಿ ಡಿನೋಟಿಫೈ ಮಾಡಬೇಕೆಂದು ದೇವರಾಜು ಕೇಳಿಕೊಂಡಿದ್ದರು. ದೇವರಾಜು ಈ ಮಾಹಿತಿಯನ್ನು ಮರೆಮಾಚಿರುವುದು ಕಂಡು ಬಂದಿದೆ. ಹೀಗಾಗಿ ಪ್ರಕರಣದಲ್ಲಿ ಬೇರೆ ಯಾರದ್ದು ಪಾತ್ರ ಇಲ್ಲ ಎಂದು ತನಿಖಾ ವರದಿಯಲ್ಲಿ ಲೋಕಾಯುಕ್ತ ಪೊಲೀಸರು ಉಲ್ಲೇಖಿಸಿದ್ದಾರೆ.
ಏನಿದು ಪ್ರಕರಣ?: ಮೈಸೂರಿನ ದೇವನೂರು ಬಡಾವಣೆಯಲ್ಲಿ ದೇವನೂರು 3ನೆ ಹಂತದ ಬಡಾವಣೆ ಅಭಿವೃದ್ಧಿಗೆ ಸ್ವಾಧೀನಪಡಿಸಿಕೊಂಡಿದೆ ಎನ್ನಲಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾವರ್ತಿಗೆ ಸೇರಿದ ಮೈಸೂರಿನ ಕೆಸರೆ ಗ್ರಾಮದ ಸರ್ವೆ ನಂಬರ್ 464ರ 3 ಎಕರೆ 16 ಗುಂಟೆ ಜಮೀನಿನ ಬದಲಿಗೆ ಸುಮಾರು 56 ಕೋಟಿ ರೂ. ಮೌಲ್ಯದ 14 ನಿವೇಶನಗಳನ್ನು ಅಕ್ರಮವಾಗಿ ನೀಡಲಾಗಿದೆ.
ಅದರಲ್ಲಿ ಸಿಎಂ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದು, ಅಧಿಕಾರಿಗಳ ಮೇಲೆ ಪ್ರಭಾವ ಬೀರಿದ್ದಾರೆ. ಆ ಸಂಬಂಧ ತನಿಖೆ, ಪ್ರಾಸಿಕ್ಯೂಷನ್ಗೆ ಅನುಮತಿ ನೀಡುವಂತೆ ಸ್ನೇಹಮಯಿ ಕೃಷ್ಣ ಸೇರಿ ಮೂವರು ಸಾಮಾಜಿಕ ಕಾರ್ಯಕರ್ತರು 2024ರ ಜೂನ್ನಲ್ಲಿರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು.
ರಾಜ್ಯಪಾಲರು ಪ್ರಕರಣದ ತನಿಖೆ, ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿ ಆ.17ರಂದು ಆದೇಶಿಸಿದ್ದರು. ಅದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಲ್ಲಿಸಿದ್ದ ಅರ್ಜಿಯನ್ನು ಸೆ.24ರಂದು ಹೈಕೋರ್ಟ್ ತಿರಸ್ಕರಿಸಿತ್ತು. ಆ ಆದೇಶ ಹೊರಬಿದ್ದ ಬೆನ್ನಲ್ಲೇ ಮುಡಾ ಪ್ರಕರಣ ಸಂಬಂಧ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.