ʼಕೆರೆಗಳ ಉಳಿವಿನ ಹೋರಾಟʼಕ್ಕಾಗಿ ಎಷ್ಟೇ ಕೇಸ್‌ಗಳನ್ನು ಹಾಕಿದರೂ ಬಗ್ಗುವುದಿಲ್ಲ : ಮುಖ್ಯಮಂತ್ರಿ ಚಂದ್ರು
ಬೆಂಗಳೂರು: ಕೆರೆಗಳ ಉಳಿವಿನ ಹೋರಾಟಕ್ಕಾಗಿ ಸರಕಾರ ನಮ್ಮ ಮೇಲೆ ಎಷ್ಟೇ ಕೇಸುಗಳು ಹಾಕಿದರೂ, ನಾವು ಬಗ್ಗುವುದಿಲ್ಲ ಜಗ್ಗುವುದಿಲ್ಲ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ಶುಕ್ರವಾರ ನಗರದ ಮಾಗಡಿ ರಸ್ತೆಯ ಹೇರೋಹಳ್ಳಿ ಕೆರೆ ವೀಕ್ಷಣೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಕೆರೆಗಳ ಉಳಿವಿಗಾಗಿ ಆಮ್ ಆದ್ಮಿ ಪಕ್ಷ ಎಲ್ಲ ಹೋರಾಟಗಳಿಗೂ ಸಿದ್ದವಾಗಿದೆ. ಇತ್ತೀಚೆಗೆ ಹೇರೋಹಳ್ಳಿ ಕೆರೆ ಹೋರಾಟದ ಸಂದರ್ಭದಲ್ಲಿ ಪಕ್ಷದ ನಾಯಕರುಗಳ ಮೇಲೆ ಸ್ಥಳೀಯ ಶಾಸಕ ಎಸ್.ಟಿ.ಸೋಮಶೇಖರ್ ಒತ್ತಡದ ಮೇಲೆ ಪೊಲೀಸರು ಕ್ರಿಮಿನಲ್ ಮೊಕದ್ದಮೆಯನ್ನು ಹಾಕಿದ್ದಾರೆ ಎಂದರು.
ಕೆರೆಗಳನ್ನು ಒತ್ತುವರಿ ಮಾಡಿರುವ ರಿಯಲ್ ಎಸ್ಟೇಟ್ ಮಾಫಿಯಾಗಳ ವಿರುದ್ಧ ನಮ್ಮ ಪಕ್ಷವು ಸಂಪೂರ್ಣ ತೆರವುಗೊಳಿಸುವ ತನಕ ಹೋರಾಟ ಮಾಡುತ್ತದೆ. ಎಲ್ಲ ಕೆರೆಗಳಲ್ಲಿ ಎಸ್‍ಟಿಪಿ ಘಟಕಗಳನ್ನು ತೆರೆಯಬೇಕು, ನಾಗರಿಕ ಸೌಲಭ್ಯಕ್ಕಾಗಿ ಶೌಚಾಲಯ, ಕುಡಿಯುವ ನೀರು ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದರು.