‘ವಕ್ಫ್’ ರಾಜಕೀಯ ಲಾಭಕ್ಕೆ ಯತ್ನ: ಮುಖ್ಯಮಂತ್ರಿ ಚಂದ್ರು
ಬೆಂಗಳೂರು: ವಿಜಯಪುರದಲ್ಲಿ ರೈತರ ಜಮಿನು ವಕ್ಫ್ ಬೋರ್ಡ್ಗೆ ಸೇರಿದ್ದು ಎಂದು ನೋಟಿಸ್ ನೀಡಲಾಗಿರುವ ಪ್ರಕರಣದಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಗೊಂದಲ ಸೃಷ್ಟಿಸಿ, ಇದನ್ನೇ ಮುಂದಿಟ್ಟುಕೊಂಡು ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿವೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಡಾ.ಮುಖ್ಯಮಂತ್ರಿ ಚಂದ್ರು, ವಕ್ಫ್ ಆಸ್ತಿ ವಿವಾದವನ್ನು ಜ್ವಲಂತವಾಗಿರಿಸಿ ರಾಜಕೀಯ ಲಾಭ ಪಡೆಯಲು ಎರಡು ಪಕ್ಷಗಳು ಹವಣಿಸುತ್ತಿವೆ. ವಕ್ಫ್ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಕಾಲಕ್ಕನುಗುಣವಾಗಿ ನವೀಕರಿಸದೆ ಗೊಂದಲಗಳನ್ನು ಸೃಷ್ಟಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಪುಟ ಸಚಿವರಿಗೆಲ್ಲ ಉಪಚುನಾವಣೆ ಉಸ್ತುವಾರಿ ಹೊರಿಸಲಾಗಿದೆ. ರಾಜ್ಯದ ಆಡಳಿತ ಯಂತ್ರವೇ ಸ್ಥಗಿತಗೊಂಡಿದೆ. ಆದರೆ ಇದನ್ನು ವಕ್ಫ್ ಬೋರ್ಡ್ ಆಸ್ತಿ ವಿವಾದದ ಮೂಲಕ ಮರೆ ಮಾಚಲು ಪ್ರಯತ್ನಗಳು ನಡೆಯುತ್ತಿವೆ. ಸಚಿವ ಝಮೀರ್ ಅಹಮ್ಮದ್ಖಾನ್ ಪರಿಸ್ಥಿತಿಯನ್ನು ಅವಲೋಕಿಸಿ ರೈತರಿಗೆ ನ್ಯಾಯ ಒದಗಿಸುವ ಪ್ರಯತ್ನ ಮಾಡಬೇಕೆ ವಿನಃ ಅಲ್ಪಸಂಖ್ಯಾತರನ್ನು ಎತ್ತಿಕಟ್ಟುವ ಕೆಲಸವನ್ನು ಮಾಡಬಾರದು ಎಂದು ಮುಖ್ಯಮಂತ್ರಿ ಚಂದ್ರು ಬೇಸರ ವ್ಯಕ್ತಪಡಿಸಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಹಳೇ ಚಾಳಿಯನ್ನೇ ಮುಂದುವರಿಸಿದ್ದಾರೆ. ರಾಜ್ಯದ ಯಾವುದೇ ಮೂಲೆಯಲ್ಲಿ ಕೋಮು ವಿಚಾರಕ್ಕೆ ಸಂಬಂಧಿಸಿ ವಿವಾದವಾದರೆ ಎಲ್ಲಿದ್ದರೂ ಓಡಿ ಬಂದು ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಾರೆ. ಮಳೆಯಿಂದ ರಾಜಧಾನಿಗೆ ಸಾಕಷ್ಟು ಹಾನಿಯಾಗಿದೆ. ಇಲ್ಲಿನ ಜನ ಸಾಕಷ್ಟು ಸಮಸ್ಯೆಗಳ ವಿರುದ್ಧ ಹೋರಾಡುತ್ತಿದ್ದರು ತಲೆ ಕೆಡಿಸಿಕೊಳ್ಳದ ತೇಜಸ್ವಿ ಸೂರ್ಯ ವಿಜಯಪುರ ರೈತರ ಬಗ್ಗೆ ಹಠಾತ್ತನೆ ಕಾಳಜಿ ತೋರಿಸುತ್ತಿರುವುದು ಹಾಸ್ಯಾಸ್ಪದ ಎಂದು ಅವರು ಲೇವಡಿ ಮಾಡಿದ್ದಾರೆ.