ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಸಮಾವೇಶ ಯಶಸ್ವಿ: ಮುಹಮ್ಮದ್ ಉಬೇದುಲ್ಲಾ ಶರೀಫ್
ಬೆಂಗಳೂರು: ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ 24 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ನಡೆಸಿದ ತನ್ನ 29ನೇ ರಾಷ್ಟ್ರೀಯ ಸಮಾವೇಶವು ಅತ್ಯಂತ ಯಶಸ್ವಿಯಾಗಿ ಸಮಾಪನಗೊಂಡಿತು ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಸಮಾವೇಶದ ಕೋರ್ ಕಮಿಟಿ ಸದಸ್ಯ ಮುಹಮ್ಮದ್ ಉಬೇದುಲ್ಲಾ ಶರೀಫ್ ತಿಳಿಸಿದರು.
ಮಂಗಳವಾರ ನಗರದ ದಾರುಲ್ ಉಲೂಮ್ ಸಬೀಲುರ್ರಶಾದ್(ಅರೇಬಿಕ್ ಕಾಲೇಜು)ನಲ್ಲಿ ಆಯೋಜಿಸಲಾಗಿದ್ದ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಮೀರೆ ಶರೀಅತ್ ಮೌಲಾನಾ ಸಗೀರ್ ಅಹ್ಮದ್ ಖಾನ್ ರಶಾದಿ ಸಂಚಾಲನೆಯಲ್ಲಿ ಈ ಸಮಾವೇಶವನ್ನು ಸಂಘಟಿಸಲಾಗಿತ್ತು. ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‍ನ ಸದಸ್ಯರು ದೇಶದ ಎಲ್ಲ ಭಾಗಗಳಿಂದ ಆಗಮಿಸಿದ್ದರು ಎಂದು ತಿಳಿಸಿದರು.
ಸ್ವಾಗತ ಸಮಿತಿ ಹಾಗೂ ಉಪ ಸಮಿತಿಯ ಸಂಚಾಲಕರು ಈ ಸಮಾವೇಶದ ಯಶಸ್ಸಿಗೆ ಶ್ರಮಿಸಿದ್ದಾರೆ. ಪ್ರಮುಖವಾಗಿ ಸೈಯದ್ ಅಶ್ರಫ್, ಮುಬೀನ್ ಮುನವ್ವರ್, ಅಬ್ದುಲ್ ಸುಭಾನ್, ಮನ್ಸೂರ್ ಅಲಿ ಖಾನ್, ಶುಜಾವುದ್ದೀನ್ ಎಲ್ಲರೂ ಶ್ರಮಿಸಿದ್ದಾರೆ. ಸಬೀಲುರ್ರಶಾದ್‍ನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇಲ್ಲಿ ಸೇವಕರಾಗಿ ಕೆಲಸ ಮಾಡಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ನಡೆದ ಸಾರ್ವಜನಿಕ ಸಮಾವೇಶವನ್ನು ಯಶಸ್ವಿಗೊಳಿಸಲು ಜಿಲ್ಲಾ ಕೇಂದ್ರಗಳಲ್ಲಿ ಸಭೆಗಳನ್ನು ನಡೆಸಿ ಜನರು ಈ ಐತಿಹಾಸಿಕ ಸಮಾವೇಶದ ಭಾಗವಾಗುವಂತೆ ಪ್ರೇರೇಪಿಸಿದ ಮೌಲಾನಾ ಮಕ್ಸೂದ್ ಇಮ್ರಾನ್, ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ, ಮೌಲಾನಾ ಸೈಯ್ಯದ್ ತನ್ವೀರ್ ಹಾಶ್ಮಿ ಅವರಿಗೆ ಅಭಿನಂದನೆಗಳು ಎಂದು ಉಬೇದುಲ್ಲಾ ಶರೀಫ್ ತಿಳಿಸಿದರು.
ದೇಶದ ಸುಮಾರು 30 ಕೋಟಿ ಮುಸ್ಲಿಮರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಕೇಂದ್ರ ಸರಕಾರದ ವಕ್ಫ್ ವಿಧೇಯಕವನ್ನು ತೀವ್ರವಾಗಿ ವಿರೋಧಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆದ ಸಮಾವೇಶವು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿತ್ತು ಎಂದು ಅವರು ತಿಳಿಸಿದರು.
ಸಮಾವೇಶದ ಸ್ವಾಗತ ಸಮಿತಿಯ ಸದಸ್ಯ ಸೈಯ್ಯದ್ ಅಶ್ರಫ್ ಮಾತನಾಡಿ, ಸರಕಾರ ತನ್ನ ಗೆಜೆಟ್(ರಾಜ್ಯಪತ್ರ)ನಲ್ಲಿ ‘ವಕ್ಫ್’ ಎಂದು ಘೋಷಿಸಿರುವ ಆಸ್ತಿಗಳ ರಕ್ಷಣೆಗಾಗಿ ನಮ್ಮ ಹೋರಾಟ ನಡೆಯುತ್ತಿದೆಯೇ ಹೊರತು, ಬೇರೆಯವರ ಆಸ್ತಿಗಳನ್ನು ನಮ್ಮದಾಗಿಸಿಕೊಳ್ಳಲು ಅಲ್ಲ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸರಕಾರ ಈ ಮಸೂದೆಯನ್ನು ಯಾವುದೇ ತಿದ್ದುಪಡಿಗಳಿಲ್ಲದೆ ಅಂಗೀಕರಿಸಿದರೆ ಸಂಸತ್ತು ಹಾಗೂ ವಿಧಾನಸಭೆಗಳ ಎದುರು ಸಂವಿಧಾನ ಹಾಗೂ ಕಾನೂನಿನ ಚೌಕಟ್ಟಿನಲ್ಲಿ ನಮಗೆ ಲಭ್ಯವಿರುವ ಅವಕಾಶವನ್ನು ಬಳಸಿಕೊಂಡು ಧರಣಿ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿಯೂ ವಕ್ಫ್ ಆಸ್ತಿಗಳ ಕುರಿತು ವಿವಾದ ಎದ್ದಿದೆ. ಸರಕಾರ ಒಂದು ಸಮಿತಿಯನ್ನು ಮಾಡಿ, ಯಾರಿಗೆಲ್ಲ ನೋಟಿಸ್ ನೀಡಲಾಗಿದೆಯೋ ಆ ಆಸ್ತಿಗಳ ಬಗ್ಗೆ ಪರಿಶೀಲನೆ ಮಾಡಲಿ. ಅವು ವಕ್ಫ್ ಆಸ್ತಿಗಳಾಗಿದ್ದರೆ ವಕ್ಫ್‌ಗೆ ಹಿಂದಿರುಗಿಸಲಿ. ಬೇರೆಯವರ ಆಸ್ತಿಗಳ ಮೇಲೆ ನಾವು ನಮ್ಮ ಹಕ್ಕನ್ನು ಸಾಧಿಸುವುದಿಲ್ಲ ಎಂದು ಸೈಯ್ಯದ್ ಅಶ್ರಫ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಮಾವೇಶದ ಸ್ವಾಗತ ಸಮಿತಿ ಸದಸ್ಯ ಮುಬೀನ್ ಮುನವ್ವರ್ ಉಪಸ್ಥಿತರಿದ್ದರು.
ಸೈಯ್ಯದ್ ಮುಹಮ್ಮದ್ ಬ್ಯಾರಿ ಅವರಿಗೆ ಕೃತಜ್ಞತೆಗಳು :
ಆಲ್ ಇಂಡಿಯಾ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್‍ನ 29ನೇ ವಾರ್ಷಿಕ ಸಭೆ ನಡೆದಂತಹ ಐವಾನ್ ಎ ಮೌಲಾನಾ ಅಬೂ ಸವೂದ್ ಸಭಾಂಗಣವನ್ನು ಬ್ಯಾರೀಸ್ ಗ್ರೂಪ್ ಮುಖ್ಯಸ್ಥ ಸೈಯ್ಯದ್ ಮುಹಮ್ಮದ್ ಬ್ಯಾರಿ ಸಂಪೂರ್ಣವಾಗಿ ನವೀಕರಣ ಗೊಳಿಸಿಕೊಟ್ಟಿದ್ದಾರೆ. ಅದೇ ರೀತಿ, ಎಕೆಎಸ್‍ನ ಅಬ್ಬಾಸ್ ಖಾನ್ ಸಮಾವೇಶಕ್ಕೆ ಅಗತ್ಯವಿದ್ಧ ಪಿಠೋಪಕರಣಗಳ ವ್ಯವಸ್ಥೆ ಮಾಡಿಕೊಟ್ಟಿದ್ದರು. ಸಚಿವರು, ಶಾಸಕರು, ಪೊಲೀಸರು ಎಲ್ಲರಿಗೂ ಮುಹಮ್ಮದ್ ಉಬೇದುಲ್ಲಾ ಶರೀಫ್ ಕೃತಜ್ಞತೆಗಳನ್ನು ಸಲ್ಲಿಸಿದರು.