ʼಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲʼ ಸುತ್ತೋಲೆ: ಸಚಿವ ಶಿವರಾಜ ತಂಗಡಗಿ ಸ್ಪಷ್ಟನೆ
ಬೆಂಗಳೂರು: ಖಾಸಗಿ ಶಾಲೆಗಳಲ್ಲಿ ಇನ್ನು ಮುಂದೆ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂಬರ್ಥದ ಸುತ್ತೋಲೆ ಚರ್ಚೆಗೆ ಗ್ರಾಸವಾಗುತ್ತಿದ್ದಂತೆಯೇ ಸಚಿವ ಶಿವರಾಜ್ ತಂಗಡಗಿ ಈ ಸಂಬಂಧ ಸ್ಪಷ್ಟನೆ ನೀಡಿದ್ದಾರೆ. ʼಒಂದು ಸಣ್ಣ ಮುದ್ರಣದಲ್ಲಿ ಸಮಸ್ಯೆ ಆಗಿದೆ. ಆದೇಶ ಮಾಡಬೇಕಾದರೆ ಸರಕಾರಿ ಶಾಲೆ ಅನುದಾನಿತ ಶಾಲೆ ಅಂತ ತಪ್ಪಾಗಿ ಮುದ್ರಣ ಆಗಿದೆ. ಅದು ಎಲ್ಲಾ ಶಾಲೆಗಳು ಅಂತ ತಿದ್ದುಪಡಿ ಮಾಡಿಸುತ್ತೇವೆ. ಸಹಜವಾಗಿ ಸುತ್ತೋಲೆ ಒಳಗಡೆ ಸಣ್ಣಪುಟ್ಟ ಸಮಸ್ಯೆ ಆಗಿದೆ, ತಿದ್ದಿಕೊಳ್ಳುತ್ತೇವೆ ಎಂದು ಹೇಳಿದರು.
ಸುತ್ತೋಲೆಯಲ್ಲಿ ಏನಿದೆ?: ಖಾಸಗಿ ಶಾಲೆಗಳಲ್ಲಿ ಇನ್ನು ಮುಂದೆ ನಾಡಗೀತೆ ಹಾಡುವುದು ಕಡ್ಡಾಯವಲ್ಲ ಎಂಬರ್ಥದ ಸುತ್ತೋಲೆಯನ್ನು ರಾಜ್ಯ ಸರಕಾರ ಹೊರಡಿಸಿತ್ತು. ರಾಷ್ಟ್ರ ಕವಿ ಕುವೆಂಪುರವರ ‘ಜಯ ಭಾರತ ಜನನಿಯ ತನುಜಾತೆ’ ಕವನವನ್ನು ‘ನಾಡಗೀತೆ’ಯಾಗಿ ಘೋಷಿಸುವ ಕುರಿತು ಹೊರಡಿಸಲಾದ ಸರಕಾರದ ಆದೇಶ ಹಾಗೂ ಅದಕ್ಕೆ ಫೆ.1ರಂದು ಮಾಡಲಾದ ತಿದ್ದುಪಡಿ ಪ್ರಕಾರ, ‘ಎಲ್ಲಾ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು’ ಎಂಬುದರ ಬದಲಾಗಿ, ‘ಸರಕಾರಿ ಶಾಲೆಗಳು, ಅನುದಾನಿತ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಗೂ ಸರಕಾರದ ಇಲಾಖೆಗಳು ಹಾಗೂ ನಿಗಮ, ಮಂಡಳಿ, ಪ್ರಾಧಿಕಾರ ಮುಂತಾದ ಅರೆ ಸರಕಾರಿ ಸಂಸ್ಥೆಗಳ ಅಧಿಕೃತ ಕಾರ್ಯಕ್ರಮಗಳನ್ನು ಏರ್ಪಡಿಸುವ ಪ್ರಾರಂಭದಲ್ಲಿ ಹಾಡುವುದು’ ಎಂದು ತಿದ್ದಿ ಓದಿಕೊಳ್ಳತಕ್ಕದ್ದು ಎಂಬುದಾಗಿ ರಾಜ್ಯ ಸರಕಾರ ಹೊರಡಿಸಿದ್ದ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.