13 ವರ್ಷ ಪೂರೈಸಿದ ಬೆಂಗಳೂರಿನ ʼನಮ್ಮ ಮೆಟ್ರೋʼ
ಸಾಂದರ್ಭಿಕ ಚಿತ್ರ
ಬೆಂಗಳೂರು : ನಗರದಲ್ಲಿ ನಮ್ಮ ಮೆಟ್ರೋ ರೈಲು ಸಂಚಾರ ಪ್ರಾರಂಭವಾಗಿ 13 ವರ್ಷಗಳು ಕಳೆದಿದ್ದು, 2011ರ ಅ.20ರಂದು ಮೊದಲ ಬಾರಿಗೆ ನಮ್ಮ ಮೆಟ್ರೋ ಸಂಚಾರ ನಡೆಸಿತು.
ಟ್ರಾಫಿಕ್ ಸಮಸ್ಯೆಯಿಂದ ಬೇಸತ್ತಿದ್ದ ನಗರದ ಜನತೆಗೆ ನಮ್ಮ ಮೆಟ್ರೋ ಸಹಕಾರಿಯಾಗಿದೆ. ನಗರದ ಎಲ್ಲಾ ಪ್ರದೇಶಗಳಿಗೂ ಮೆಟ್ರೋ ರೈಲು ಸಂಚಾರವಿಲ್ಲದಿದ್ದರೂ, ವಾಹನ ದಟ್ಟಣೆಯಿರುವ ಕಡೆಗೆ ಮೆಟ್ರೋ ಅನುಕೂಲವಿದೆ. ಪ್ರತಿ ನಿತ್ಯ ನಮ್ಮ ಮೆಟ್ರೋದಲ್ಲಿ 8 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸಿದ್ದಾರೆ.
2011ರ ಅ.20ರಂದು ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರು ಮೆಟ್ರೋ ರೈಲಿಗೆ ಚಾಲನೆ ಕೊಟ್ಟಿದ್ದರು. ಎಂ.ಜಿ. ರಸ್ತೆಯಿಂದ ಬೈಯ್ಯಪ್ಪನಹಳ್ಳಿವರೆಗೆ ಮೊದಲಿಗೆ ಮೆಟ್ರೋ ಸಂಚಾರ ಆರಂಭ ಆಗಿತ್ತು. 6 ಕಿ.ಮೀ. ಮಾರ್ಗದಲ್ಲಿ ಮೊದಲ ಬಾರಿಗೆ ಮೆಟ್ರೋ ಸಂಚರಿಸಿತ್ತು. ಇಂದು ಒಟ್ಟು 56.1 ಕಿ.ಮೀ ವರೆಗೆ ಕಾರ್ಯಾಚರಣೆ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ಪ್ರಮುಖ ಸ್ಥಳಗಳಿಗೆ ನಮ್ಮ ಮೆಟ್ರೋ ಕಾರ್ಯಾಚರಣೆ ನಡೆಸಲಿದೆ.
ಹಂತ ಹಂತವಾಗಿ ನಮ್ಮ ಮೆಟ್ರೋ ವಿಸ್ತರಣೆ ಮಾಡುತ್ತಿರುವ ಬಿಎಂಆರ್ಸಿಎಲ್ ಒಂದೆರಡು ವರ್ಷದಲ್ಲಿ ನಮ್ಮ ಮೆಟ್ರೋ ಜಾಲವನ್ನು 200 ಕೀಲೋ ಮೀಟರ್ ಗೆ ಹೆಚ್ಚಿಸುವ ಗುರಿಯೊಂದಿಗೆ ಕೆಲಸ ಮಾಡುತ್ತಿದೆ. ಆರ್.ವಿ ರಸ್ತೆಯಿಂದ ಬೊಮ್ಮಸಂದ್ರದ ಹಳದಿ ಮಾರ್ಗದಲ್ಲಿ ಇದೇ ಮೊದಲ ಬಾರಿಗೆ ಚಾಲಕರಹಿತ ರೈಲು ಓಡಿಸಲು ತೀರ್ಮಾನಿಸಲಾಗಿದೆ. ಇಲ್ಲಿ ಸಹ ಎಲ್ಲ ಪ್ರಾಯೋಗಿಕ, ಸಿಗ್ನಲ್, ಸುರಕ್ಷತೆ ತಪಾಸಣೆ ಪೂರ್ಣಗೊಂಡಿದೆ.
2024ರ ಆ.14ರಂದು ಒಂದೇ ದಿನ 9,17,365 ಪ್ರಯಾಣಿಕರು ನಮ್ಮ ಮೆಟ್ರೋ ರೈಲಿನಲ್ಲಿ ಸಂಚರಿಸಿ ದಾಖಲೆ ನಿರ್ಮಿಸಿದ್ದರು. ಕೆಂದ್ರ ಮತ್ತು ರಾಜ್ಯ ಸರಕಾರದ ಸಹಭಾಗಿತ್ವದ ಬೆಂಗಳೂರು ಮೆಟ್ರೋ ರೈಲು ಯೋಜನೆಯ ಅನುಷ್ಠಾನದ ಜವಾಬ್ದಾರಿಯನ್ನು ಬೆಂಗಳೂರು ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ ವಹಿಸಿಕೊಂಡಿದೆ. 97.84 ಕಿಮೀ ಮೆಟ್ರೋ ಮಾರ್ಗಗಳು ಪ್ರಸ್ತುತ ನಿರ್ಮಾಣ ಹಂತದಲ್ಲಿದೆ.