ನಂದಿನಿ ಹಾಲಿನ ದರ ಹೆಚ್ಚಳ | ನಾಳೆಯಿಂದಲೇ ಜಾರಿ : ಭೀಮಾ ನಾಯ್ಕ್
ಲೀಟರ್ ನಲ್ಲಿ 50 ಎಂಎಲ್ ಹೆಚ್ಚುವರಿ ಹಾಲು
ಬೆಂಗಳೂರು : ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯ ಬೆನ್ನಲ್ಲೆ ರಾಜ್ಯ ಸರಕಾರ ನಂದಿನಿ ಹಾಲಿನ ಬೆಲೆಯನ್ನು ಪ್ರತಿ ಲೀಟರ್‌ಗೆ 2 ರೂಪಾಯಿಗಳನ್ನು ಹೆಚ್ಚಳ ಮಾಡಿದ್ದು, ನಾಳೆಯಿಂದಲೇ (ಜೂ.26) ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳಿ (ಕೆಎಂಎಫ್) ತಿಳಿಸಿದೆ.
ರಾಜ್ಯ ಸರಕಾರದ ಬೆಲೆ ಏರಿಕೆ ತೀರ್ಮಾನಕ್ಕೆ ಪ್ರತಿಪಕ್ಷಗಳು ಹಾಗೂ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಹಾಲಿನ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ‘ನಂದಿನಿ ಹಾಲಿನ ಪ್ರಮಾಣವನ್ನು 50 ಎಂ.ಎಲ್ ಹೆಚ್ಚಳ ಮಾಡಿ, ಹೆಚ್ಚುವರಿ ಹಾಲಿಗೆ 2 ರೂ ದರ ನಿಗದಿಪಡಿಸಿದೆ ಅಷ್ಟೇ ಹೊರತು ಯಾವುದೇ ಬೆಲೆಯನ್ನು ಏರಿಕೆ ಮಾಡಿಲ್ಲ’ ಎಂದು ಸಿದ್ದರಾಮಯ್ಯ ವಿವರಣೆ ನೀಡಿದ್ದಾರೆ.
‘ನಂದಿನಿಯ ಎಲ್ಲ ಮಾದರಿಗಳ ಹಾಲಿನ ದರ ಮತ್ತು ಪ್ರಮಾಣವನ್ನು ಪರಿಷ್ಕರಿಸಲಾಗಿದ್ದು, ಪ್ರತಿ ಅರ್ಧ ಲೀಟರ್ ಮತ್ತು ಒಂದು ಲೀಟರ್ ಹಾಲಿನ ಪ್ಯಾಕೆಟ್‍ಗಳ ದರವನ್ನು 2 ರೂ.ಗಳಂತೆ ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ದರ ನಾಳೆಯಿಂದಲೇ(ಜೂ.26) ಅನ್ವಯವಾಗಲಿದೆ’ ಎಂದು ಕೆಎಂಎಫ್ ತಿಳಿಸಿದೆ.
ಮಂಗಳವಾರ ನಗರದಲ್ಲಿ ಕೆಎಂಎಫ್ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಕೆಎಂಎಫ್‍ನ ಅಧ್ಯಕ್ಷ ಭೀಮಾನಾಯ್ಕ್ ಮಾತನಾಡಿ, ‘ಪ್ರತಿ ಅರ್ಧ ಲೀಟರ್ ಮತ್ತು ಒಂದು ಲೀಟರ್ ನಂದಿನಿ ಹಾಲಿನ ಪ್ಯಾಕೆಟ್‍ಗೆ 50 ಮಿ.ಲೀ. ಹಾಲು ಹೆಚ್ಚುವರಿಯಾಗಿ ಸೇರಿಸಲಾಗುವುದು. ಎಲ್ಲ ಹಾಲು ಒಕ್ಕೂಟಗಳಲ್ಲಿ ಹಾಲಿನ ಶೇಖರಣೆಯು ಪ್ರತಿದಿನ ಹೆಚ್ಚಾಗುತ್ತಿದ್ದು, ಪ್ರಸ್ತುತ ಶೇಖರಣೆಯೂ 1 ಕೋಟಿ ಲೀಟರ್ ವರೆಗೆ ತಲುಪಿದೆ. ಹೀಗಾಗಿ ಗ್ರಾಹಕರಿಗೆ ಹೆಚ್ಚುವರಿಯಾಗಿ ಹಾಲನ್ನು ನೀಡಲಾಗುತ್ತದೆ ಎಂದು ವಿವರಿಸಿದರು.
ಒಕ್ಕೂಟಗಳಲ್ಲಿ ಹಳೆಯ ಪ್ರಮಾಣ/ದರ ಮುದ್ರಿತವಾಗಿರುವ ಹಾಲಿನ ಪ್ಯಾಕೇಟ್‍ಗಳ ದಾಸ್ತಾನು ಇದ್ದು, ದಾಸ್ತಾನು ಮುಗಿಯುವವರೆಗೂ ಹಳೆಯ ಮುದ್ರಿತ ಪರಿಮಾಣ ಪ್ಯಾಕೇಟ್‍ಗಳಲ್ಲಿ ಹಾಲು ಸರಬರಾಜು ಆಗಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಮೊಸರು, ಇನ್ನಿತರ ಯಾವುದೇ ಹಾಲಿನ ಉತ್ಪನ್ನದ ದರ ಏರಿಕೆ ಮಾಡಲ್ಲ. ಕೇರಳ ರಾಜ್ಯದಲ್ಲಿ ಒಂದು ಲೀಟರ್ ಹಾಲಿನ ಬೆಲೆ 52 ರೂಪಾಯಿ ಇದೆ. ಗುಜರಾತ್‍ನಲ್ಲಿ ಅಮುಲ್ ಒಂದು ಲೀಟರ್ ಗೆ 56 ರೂ., ಮಹಾರಾಷ್ಟ್ರದಲ್ಲಿ 56 ರೂ., ದಿಲ್ಲಿ ಮದರ್ ಡೈರಿಯ ಹಾಲಿನ ಬೆಲೆ 54 ರೂ. ಇದೆ ಎಂದು ಅವರು ದರ ಏರಿಕೆಯನ್ನು ಸಮರ್ಥಿಸಿಕೊಂಡರು.
ಗುಜರಾತ್‍ನ ಅಮುಲ್ ಹಾಲಿಗೆ ಹೋಲಿಸಿದರೆ ಕರ್ನಾಟಕದ ನಂದಿನಿ ಹಾಲಿನ ದರ ಕಡಿಮೆಯೇ ಇದೆ. ದರ ಏರಿಕೆ ಮಾಡಿದ ನಂತರವೂ ನಮ್ಮ ರಾಜ್ಯದ ಹಾಲಿನ ಬೆಲೆಯು ಲೀಟರ್ ಗೆ ಇತರೆ ರಾಜ್ಯಗಳಿಗಿಂತ 14 ರೂ. ಕಡಿಮೆ ಇದೆ. ಗುಣಮಟ್ಟದ ಹಾಲನ್ನೂ ಕರ್ನಾಟಕ ಹಾಲು ಮಹಾಮಂಡಳ ನೀಡುತ್ತಿದೆ ಎಂದು ಅವರು ಹೇಳಿದರು.
ಕೆಎಂಎಫ್‍ನಲ್ಲಿ ಸದ್ಯ ಶೇಖರಣೆಯಾಗುತ್ತಿರುವ ಹಾಲಿನಲ್ಲಿ 30 ಲಕ್ಷ ಲೀಟರ್ ಅನ್ನು ಪೌಡರ್ ಗೆ ಕಳುಹಿಸುತ್ತಿದ್ದೇವೆ. ಇದರಲ್ಲಿ ನಮ್ಮ ಬಂಡವಾಳ ಸ್ವಲ್ಪ ಹಿನ್ನಡೆ ಆಗುತ್ತಿದೆ. ಆದರೆ ಇದರಿಂದಾಗಿ 27 ಲಕ್ಷ ಹಾಲು ಉತ್ಪಾದಕರು ಮತ್ತು ಗ್ರಾಹಕರಿಗೆ ತೊಂದರೆಯಾಗಬಾರದು. ಇಬ್ಬರೂ ನಮಗೆ ಮುಖ್ಯ. ಈ ಕಾರಣದಿಂದ ಹಾಲಿನ ದರ ಹೆಚ್ಚಿಸಿದರೂ, ಅದರ ಜತೆಗೆ ಪ್ಯಾಕೆಟ್‍ಗಳಲ್ಲಿನ ಹಾಲಿನ ಪ್ರಮಾಣವನ್ನು ಹೆಚ್ಚಿಸಿದ್ದೇವೆ ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್, ಆಡಳಿತ ಮಂಡಳಿ ಸದಸ್ಯರು ಭಾಗಿಯಾಗಿದ್ದಾರೆ.