ಪ್ರಜ್ವಲ್ ರೇವಣ್ಣ ಬಂಧಿಸುವಂತೆ ಒತ್ತಾಯಿಸಿ 700 ಮಹಿಳೆಯರಿಂದ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಬಹಿರಂಗ ಪತ್ರ
ಪ್ರಜ್ವಲ್ ರೇವಣ್ಣ
ಬೆಂಗಳೂರು : ಲೈಂಗಿಕ ಹಗರಣದಲ್ಲಿ ಭಾಗಿಯಾದ ಆರೋಪಿ ಪ್ರಜ್ವಲ್ ರೇವಣ್ಣ ಹಾಗೂ ಎಚ್.ಡಿ ರೇವಣ್ಣ ಅವರನ್ನು ಕೂಡಲೇ ಬಂಧಿಸುವಂತೆ ಸರಕಾರಕ್ಕೆ ಶಿಪಾರಸ್ಸು ಮಾಡಬೇಕು ಎಂದು ಒತ್ತಾಯಿಸಿ ಮಹಿಳಾ ಸಂಘನೆಗಳು ಸೇರಿ 700 ಮಂದಿ ಮಹಿಳೆಯರು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಬಹಿರಂಗ ಪತ್ರ ಬರೆದಿದ್ದಾರೆ.
ತನಿಖೆಗೆ ಹಾಜರಾಗಬೇಕು ಎಂದು ಪ್ರಜ್ವಲ್ ರೇವಣ್ಣ ಹಾಗೂ ಎಚ್.ಡಿ. ರೇವಣ್ಣ ಅವರಿಗೆ ಆಯೋಗವು ಕೂಡಲೇ ಸಮನ್ಸ್ ನೀಡಬೇಕು. ಹಾಗೆಯೇ ಆಯೋಗವು ತನ್ನ ಕಾರ್ಯವ್ಯಾಪ್ತಿಯಲ್ಲಿ ಆರೋಪಿಗಳಿಗೆ ನೀಡಬೇಕಾದ ಶಿಕ್ಷೆಯನ್ನು ಕೂಡಲೇ ವಿಧಿಸಬೇಕು ಎಂದು ಮಹಿಳೆಯರು ಆಗ್ರಹಿಸಿದ್ದಾರೆ.
ಕೇಂದ್ರ ಸರಕಾರವು ಆರೋಪಿ ಪ್ರಜ್ವಲ್ ರೇವಣ್ಣರಿಗೆ ನೀಡಿದ ಡಿಪ್ಲೋಮೇಟ್ ಪಾಸ್ಪೋರ್ಟ್ ಅನ್ನು ರದ್ದುಗೊಳಿಸಿ, ಭಾರತಕ್ಕೆ ವಾಪಸ್ಸು ಕರೆಸಿಕೊಳ್ಳಬೇಕು ಎಂದು ಆಯೋಗವು ಕೂಡಲೇ ಶಿಫಾರಸ್ಸು ಮಾಡಬೇಕು. ಹಾಗೆಯೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಮಾಯಾಕ ಹೆಣ್ಣು ಮಕ್ಕಳಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಶಾಸಕ ಸ್ಥಾನದಿಂದ ಎಚ್.ಡಿ. ರೇವಣ್ಣ ಅವರನ್ನು ಕೂಡಲೇ ಅಮಾನತು ಮಾಡಬೇಕು. ಒಂದು ವೇಳೆ ಪ್ರಜ್ವಲ್ ರೇವಣ್ಣ ಲೋಕಸಭಾ ಚುನಾವಣೆಯಲ್ಲಿ ಗೆದ್ದರೆ, ಸಂಸದನಾಗಿ ಪ್ರಮಾಣ ವಚನ ಸ್ವೀಕಾರ ಮಾಡದಂತೆ ನೋಡಿಕೊಳ್ಳಬೇಕು. ಪ್ರಜ್ವಲ್ ರೇವಣ್ಣ ಎನ್ಡಿಎ ಒಕ್ಕೂಟ ಪಕ್ಷದ ಅಭ್ಯರ್ಥಿಯಾಗಿದ್ದು, ಪ್ರಧಾನಿ ಮೋದಿ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದಾರೆ. ಈ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಸಮನ್ಸ್ ಜಾರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಅಮಾಯಕ ಮಹಿಳೆಯರಿಗೆ ಭದ್ರತೆಯನ್ನು ಒದಗಿಸುವ ಹಿನ್ನೆಲೆಯಲ್ಲಿ ಡಿಜಿಟಲ್ ಸರ್ಚ್ ಇಂಜಿನ್ ಹಾಗೂ ಆನ್ಲೈನ್ ಪ್ಲಾಟ್ಪಾರಂಗಳಿಗೆ ಈ ಕೂಡಲೇ ನೋಟಿಸ್ ಜಾರಿ ಮಾಡಿ, ವಿಡಿಯೋ ಮತ್ತು ಚಿತ್ರಗಳನ್ನು ತೆಗೆಯುವಂತೆ ಆದೇಶಿಸಬೇಕು. ಅಮಾಯಕ ಮಹಿಳೆಯರ ವಿಡಿಯೋಗಳನ್ನು ಹಂಚಿಕೊಳ್ಳವವರ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಒಬ್ಬ ಸಂಸದ ಹಾಗೂ ಶಾಸಕ ಲೈಂಗಿಕ ಹಗರಣದಲ್ಲಿ ಭಾಗಿಯಾಗಿದ್ದರೂ, ರಾಷ್ಟ್ರೀಯ ಮಹಿಳಾ ಆಯೋಗವು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಆರೋಪಿ ಪ್ರಜ್ವಲ್ ರೇವಣ್ಣ ಡಿಪ್ಲಾಮೇಟ್ ಪಾಸ್ಪೋರ್ಟ್ ಪಡೆದು ಹೊರದೇಶಕ್ಕೆ ಪರಾರಿ ಆಗಿದ್ದಾರೆ. ಇದಕ್ಕೆ ಅವಕಾಶ ಕಲ್ಪಿಸಿದವರ ಮೇಲೆ ಆಯೋಗ ಏಕೆ ಕ್ರಮ ವಹಿಸುತ್ತಿಲ್ಲ ಎಂದು ಮಹಿಳೆಯರು ಆಯೋಗವನ್ನು ಪ್ರಶ್ನಿಸಿದ್ದಾರೆ.