ಬೆಂಗಳೂರು ಕಂಬಳದಲ್ಲಿ ಹೊಸ ದಾಖಲೆಗಳ ಸೃಷ್ಟಿ; ಕಂಬಳ ಕರೆ ನೋಡಲು ಸೇರುತ್ತಿರುವ ಜನ: ಅಶೋಕ್ ಕುಮಾರ್ ರೈ
ಮಂಗಳೂರು, ಅ. 30: ಬೆಂಗಳೂರಿನ ಅರಮನೆ ಮೈದಾನದಲ್ಲಿ ನ. 25 ಮತ್ತು 26ರಂದು ನಡೆಯಲಿರುವ ‘ಬೆಂಗಳೂರು ಕಂಬಳ- ನಮ್ಮ ಕಂಬಳ’ಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಈಗಾಗಲೇ ಒಂದು ಹಂತದ ಕಂಬಳ ಕರೆಗಳ ನಿರ್ಮಾಣವಾಗಿದ್ದು, ಅದನ್ನು ನೋಡಲೆಂದೇ ದಿನವೊಂದಕ್ಕೆ ಸಾವಿರಾರು ಜನ ಸೇರುತ್ತಿದ್ದಾರೆ ಎಂದು ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ರೈ ಹೇಳಿದ್ದಾರೆ.
ಮಂಗಳೂರು ಪ್ರೆಸ್‌ಕ್ಲಬ್ ನ ಗೌರವ ಅತಿಥಿಯಾಗಿ ಸೋಮವಾರ ಭಾಗವಹಿಸಿ ಗೌರವ ಸ್ವೀಕರಿಸಿದ ಅವರು ಬೆಂಗಳೂರು ಕಂಬಳದ ಬಗ್ಗೆ ಮಾಹಿತಿ ನೀಡಿದರು.
ದ.ಕ. ಮತ್ತು ಉಡುಪಿ ಜಿಲ್ಲೆಯ ತುಳು ಸಂಸ್ಕೃತಿ, ಇಲ್ಲಿನ ವೈಭವವನ್ನು ರಾಜ್ಯ ಹಾಗೂ ರಾಷ್ಟ್ರದ ಜನತೆಗೆ ತೋರಿಸುವ ಜತೆಗೆ ಕಂಬಳದ ಇತಿಹಾಸದಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸುವ ಉದ್ದೇಶವನ್ನು ಕೂಡಾ ಹೊಂದಲಾಗಿದೆ. ಅದಕ್ಕಾಗಿ ಕಂಬಳದ ಕರೆಯ ಉದ್ದವನ್ನು 155 ಮೀಟರ್‌ಗೆ ಏರಿಕೆ ಮಾಡಲಾಗಿದೆ. ಕಂಬಳದ ವಿವಿಧ ವಿಭಾಗಗಳಲ್ಲಿ ಜಯಗಳಿಸುವ ಕಂಬಳದ ಕೋಣಗಳಿಗೆ, ಓಡಿಸುವವರಿಗೆ ಬಹುಮಾನ ಮೊತ್ತ, ಭಾಗವಹಿಸುವ ಪ್ರತಿ ಕೋಣಗಳ ಯಜಮಾನರಿಗೆ ಗೌರವಧನ ನೀಡುವ ನಿಟ್ಟಿನಲ್ಲಿ ನಿರ್ಧಾರ ಮಾಡಲಾಗಿದೆ. ಈಗಾಗಲೇ 116 ಜೋಡಿ ಕೋಣಗಳ ನೋಂದಣಿಯಾಗಿದೆ. ಇನ್ನೂ ಹಲವು ಕೋಣಗಳ ಯಜಮಾನರು ಭಾಗವಹಿಸಲು ಆಸಕ್ತಿ ತೋರಿದ್ದಾರೆ ಎಂದು ಅಶೋಕ್ ರೈ ವಿವರ ನೀಡಿದರು.
ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗರಿಷ್ಟ 60,000ದಷ್ಟು ಏಕಕಾಲಕ್ಕೆ ಸೇರಿದ ದಾಖಲೆ ಇದ್ದು, ಕಂಬಳದ ಎರಡು ದಿನಗಳ ಅವಧಿಯಲ್ಲಿ ಅಂದಾಜು 8 ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ. ಅದಕ್ಕೆ ಅಗತ್ಯವಾದ ಎಲ್ಲಾ ತಯಾರಿ ನಡೆಸಲಾಗುತ್ತಿದೆ. ಕಂಬಳ ವೀಕ್ಷಣೆಗೆ ಈಗಾಗಲೇ ರಾಜ್ಯದ ಐಎಎಸ್, ಐಪಿಎಸ್ ಸೇರಿದಂತೆ ಹಿರಿಯ ಶ್ರೇಣಿಯ ಅಧಿಕಾರಿಗಳು ತಮ್ಮ ಕುಟುಂಬ ಸಹಿತವಾಗಿ ಭಾಗವಹಿಸಲು ಅವಕಾಶ ಕೋರಿದ್ದಾರೆ. ಹಾಗಾಗಿ ವಿವಿಐಪಿ, ವಿಐಪಿ ಸೇರಿದಂತೆ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ ಎಂದು ಅಶೋಕ್ ರೈ ವಿವರ ನೀಡಿದರು.
ಬಾಲಿವುಡ್, ಕ್ರೀಡಾ ತಾರೆಯರ ಆಕರ್ಷಣೆ
ಕಂಬಳದಲ್ಲಿ ಬಾಲಿವುಡ್ ತಾರೆಯರು ಹಾಗೂ ಕ್ರೀಡಾ ತಾರೆಯರು ಕೂಡಾ ಭಾಗವಹಿಸಲಿದ್ದಾರೆ. ಐಶ್ವರ್ಯ ರೈ ಅವರನ್ನು ಆಹ್ವಾನಿಸಲಾಗಿದೆ. ಶಿಲ್ಪಾಶೆಟ್ಟಿ, ಅನುಷ್ಕಾ ಶೆಟ್ಟಿ, ರಜನೀಕಾಂತ್, ಯಶ್, ದರ್ಶನ್ ಮೊದಲಾದ ತಾರೆಯರು ಭಾಗವಹಿಸಲು ಒಪ್ಪಿಗೆ ನೀಡಿದ್ದು, ಕ್ರಿಕೆಟ್ ತಾರೆ ಕೆ.ಎಲ್. ರಾಹುಲ್ ಅವರೂ ಬರುವುದಾಗಿ ಹೇಳಿದ್ದಾರೆ ಎಂದು ಅವರು ಹೇಳಿದರು.
ದ.ಕ. ಜಿಲ್ಲೆಯಿಂದಲೇ ಕೋಣಗಳಿಗೆ ನೀರು ಸರಬರಾಜು
ರಾಜಕೀಯ ರಹಿತವಾದ ಕ್ರೀಡೆ ಕಂಬಳವಾಗಿದ್ದು, ತುಳುನಾಡಿನ ಸಾಂಪ್ರದಾಯಿಕ ಅಡುಗೆ, ತಿಂಡಿತಿನಿಸುಗಳು ಸೇರಿದಂತೆ ಇಲ್ಲಿನ ವೈಶಿಷ್ಟಕ್ಕೆ ಸಂಬಂಧಿಸಿದ ಮಳಿಗೆಗಳು ಸೇರಿದಂತೆ 250 ಮಳಿಗೆಗಳಿಗೆ ಅವಕಾಸ ಕಲ್ಪಿಸಲಾಗುತ್ತಿದೆ. ಕಂಬಳದಲ್ಲಿ ಭಾಗವಹಿಸುವ ಕೋಣಗಳಿಗೆ ಜ್ವರ, ಅತಿಸಾರವನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲೆಯಿಂದಲೇ ಕುಡಿಯಲು ನೀರು ಪೂರೈಕೆಗೂ ವ್ಯವಸ್ಥೆ ಮಾಡಲಾಗುತ್ತಿದೆ.ಕಂಬಳದಲ್ಲಿ ಭಾಗವಹಿಸುವ ಕೋಣಗಳಿಗೆ ಉಪ್ಪಿನಂಗಡಿಯಲ್ಲಿ ಏಕಕಾಲಕ್ಕೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗುತ್ತದೆ. ಅಲ್ಲಿಂದ ಹೊರಟ ಕೋಣಗಳು ಹಾಸದಲ್ಲಿ ಸುಮಾರು 3 ಗಂಟೆಗಳ ಕಾಲ ವಿಶ್ರಾಂತಿ ಪಡೆಯಲಿದ್ದು, ಅಲ್ಲಿ ಅವುಗಳಿಗೆ ಸ್ವಾಗತವನ್ನೂ ಮಾಡಲಾಗುತ್ತದೆ. ಉಳಿದಂತೆ ದಾರಿಯುದ್ದಕ್ಕೂ ಸ್ಥಳೀಯ ಹಾಗೂ ತುಳುಸಂಘಟನೆಗಳಿಂದ ಕೋಣಗಳನ್ನು ಸ್ವಾಗತಿಸುವ ಕಾರ್ಯಕ್ರಮವೂ ಇದೆ ಎಂದು ಅವರು ವಿವರ ನೀಡಿದರು.
ಹಸುವಿನ ಕೊಟ್ಟಿಗೆಯಲ್ಲಿದ್ದ ಅನುಭವ ಮರೆತಿಲ್ಲ
ಈ ಬಾರಿಯೂ ನ. 13ರಂದು ದೀಪಾವಳಿಯ ಪ್ರಯುಕ್ತ ಪುತ್ತೂರು ಕೊಂಬೆಟ್ಟು ಜೂನಿಯರ್ ಕಾಲೇಜಿನಲ್ಲಿ 50000 ಬಡ ಮಹಿಳೆಯರಿಗೆ ಸೀರೆ ಹಾಗೂ ಪುರುಷರಿಗೆ ಬೆಡ್‌ಶೀಟ್ ವಿತರಿಸುವ ಕಾರ್ಯ ನಡೆಯಲಿದೆ. ಶಿಕ್ಷಕರಾಗಿದ್ದ ತಂದೆಯೊಂದಿಗೆ ಐದು ವರ್ಷಗಳ ಕಾಲ ಹಸುವಿನ ಕೊಟ್ಟಿಗೆಯಲ್ಲಿ ಕುಟುಂಬ ಸಹಿತ ಜೀವನ ಕಳೆದ ಅನುಭವ ಇದೆ. ಪದವಿ ಕಾಲೇಜು ಓದುತ್ತಲೇ ಜ್ಯೂಸಿನ ವ್ಯಾಪಾರ ಆರಂಭಿಸಿದ ನಾನು ಕಾಲೇಜು ಮುಗಿಸುವ ವೇಳೆಗೆ ಎರಡು ಕೋಟಿ ರೂ.ಗಳ ವ್ಯವಹಾರ ಮಾಡುವ ಮೂಲಕ ವ್ಯಾಪಾರದಲ್ಲಿ ಯಶಸ್ಸು ಕಂಡಿದ್ದೇನೆ. ಹಾಗಾಗಿ ಹಿಂದೆ ನಡೆದು ಬಂದ ದಾರಿಯನ್ನು ಮರೆತಿಲ್ಲ. ಬಡತನದಿಂದಲೇ ನಾನು ಬೆಳೆದು ಬಂದವನಾಗಿರುವ ಕಾರಣ ಈಗ ನನ್ನ ಸಂಪಾದನೆಯ ಒಂದಿಷ್ಟು ಭಾಗವನ್ನು ಕಳೆದ 10 ವರ್ಷಗಳಿಂದ ಸಮಾಜ ಕಾರ್ಯಕ್ಕಾಗಿ ಬಳಸುತ್ತಿದ್ದೇನೆ ಎಂದರು.
ಬೆಂಗಳೂರಿನಲ್ಲಿ ಕಂಬಳಕ್ಕೆ ಜಾಗದ ನಿರೀಕ್ಷೆಯೇ ಇರಲಿಲ್ಲ!
ತುಳುವನ್ನು ಹೆಚ್ಚುವರಿ ಭಾಷೆಯಾಗಿ ಸಂವಿಧಾನದ 8ನೆ ಪರಿಚ್ಚೇದಕ್ಕೆ ಸೇರಿಸುವಂತೆ ವಿಧಾನಸಭೆಯ ಕಲಾಪದಲ್ಲಿ ಮಾತನಾಡಿದ ಸಂದರ್ಭ ಬೆಂಗಳೂರಿನ ತುಳುಸಂಘಟನೆಗಳು ನನ್ನನ್ನು ಅಭಿನಂದಿಸಿ ಬೆಂಗಳೂರಿನಲ್ಲಿ 20 ಲಕ್ಷಕ್ಕೂ ಅಧಿಕವಿರುವ ತುಳುವರಿಗೆ ತುಳು ಭವನದ ಬೇಡಿಕೆ ಇರಿಸಿದ್ದರು. ಆ ಸಂದರ್ಭ ಬೆಂಗಳೂರಿನಲ್ಲಿ ಕಂಬಳ ಕಂಬಳ ಮಾಡುವ ಆಲೋಚನೆ ಬಂದಾಗ ಬೆಂಗಳೂರಿನಲ್ಲಿ ಎಕರೆಗಟ್ಟಲೆ ಜಾಗದ ನಿರೀಕ್ಷೆಯೇ ಇರಲಿಲ್ಲ. ಈ ಬಗ್ಗೆ ಮಹಾರಾಣಿಯನ್ನು ಭೇಟಿಯಾದಾಗ ಕಂಬಳದಲ್ಲಿ ಕೋಣಗಳಿಗೆ ಹಿಂಸೆ ನೀಡಲಾಗುತ್ತದೆ ಎಂದು ಹಿಂದೆ ಸರಿದಿದ್ದರು. ಅವರಿಗೆ ಮನವರಿಕೆ ಮಾಡಿದಾಗ ಅರಮನೆಯ ರಾಜಭಟರಿಂದ ಅನುಮತಿ ದೊರೆತರೆ ಅವಕಾಶ ಎಂದು ಹೇಳಿದ್ದರು. ಅದರಂತೆ 10 ದಿನಗಳ ಬಳಿಕ ಅವಕಾಶ ದೊರಕಿತ್ತು. ಉಪ ಮುಖ್ಯಮಂತ್ರಿಯವರಿಗೆ ಅನುಮತಿ ಕೇಳಲು ಹೋಗಿದ್ದೆ. ಆದರೆ ಅವರು ಕಾರ್ಯಕ್ರಮದಲ್ಲಿ ಸ್ವ ಇಚ್ಚೆಯಿಂದ ಭಾಗವಹಿಸುವ ಮೂಲಕ ಪ್ರೋತ್ಸಾಹ ನೀಡಿದ್ದಾರೆ ಎಂದು ಬೆಂಗಳೂರಿನಲ್ಲಿ ಕಂಬಳದ ಹಿನ್ನೆಲೆಯನ್ನು ಅಶೋಕ್ ಕುಮಾರ್ ರೈ ವಿವರಿಸಿದರು.
ದಾಯ್ಜಿವರ್ಲ್ಡ್ ಮೀಡಿಯಾ ಪ್ರೈ.ಲಿ.ನ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ ಕಾರ್ಯಕ್ರಮ ಉದ್ಘಾಟಿಸಿದರು. ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು.
ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್‌ನ ರಾಮಕೃಷ್ಣ ಆರ್., ಕಾರ್ಯಕ್ರಮ ಸಂಯೋಜಕ ವಿದಯ ಕೋಟ್ಯಾನ್ ಉಪಸ್ಥಿತರಿದ್ದರು.
ಹರೀಶ್ ಮೋಟುಕಾನ ಕಾರ್ಯಕ್ರಮ ನಿರೂಪಿಸಿದರು. ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಪ್ರಧಾನಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು.
ತುಳು ಭಾಷೆಗೆ ಮಾನ್ಯತೆ ದೊರಕಿಸುವ ಗುರಿ
ತುಳುವಿಗೆ ಅಧಿಕೃತ ಭಾಷೆಯಾಗಿ ಮಾನ್ಯತೆ ದೊರಕಿಸುವುದು ಪ್ರಮುಖ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿಯನ್ನು ಒದಗಿಸುವ ಕಾರ್ಯವೂ ನಡೆಯುತ್ತಿದೆ. ಇದೇ ವೇಳೆ 20 ಲಕ್ಷಕ್ಕೂ ಅಧಿಕ ತುಳುವವರು ಹೊಂದಿರುವ ಬೆಂಗಳೂರಿನಲ್ಲಿ ತುಳು ಭವನ ನಿರ್ಮಾಣಕ್ಕೆಪ್ರಯತ್ನ ನಡೆಯುತ್ತಿದೆ. ಈಗಾಗಲೇ ಉಪ ಮುಖ್ಯಮಂತ್ರಿಯಿಂದ ಒಪ್ಪಿಗೆಯೂ ದೊರಕಿದ್ದು, ಕಂಬಳದಲ್ಲಿ ಉಳಿಕೆಯಾಗುವ ಹಣವನ್ನು ತುಳು ಭವನಕ್ಕೆ ವಿನಿಯೋಗಿಸಲು ಚಿಂತಿಸಲಾಗಿದೆ. 40ರಿಂದ 50 ಕೊಠಡಿಗಳು, ರಿಕ್ರಿಯೇಶನ್ ಕ್ಲಬ್, ಸಭಾಂಗಣದೊಂದಿಗೆ ತುಳು ಭವನ ನಿರ್ಮಿಸುವ ಆಲೋಚನೆ ಇದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.