ಬೆಂಗಳೂರು | ಬಂಧನಕ್ಕೆ ತೆರಳಿದ್ದ ಸಿಸಿಬಿ ಪೊಲೀಸರ ಮೇಲೆ ಆಫ್ರಿಕಾ ಪ್ರಜೆಗಳಿಂದ ಹಲ್ಲೆ
ಬೆಂಗಳೂರು: ಮಾದಕ ವಸ್ತುಗಳ ಸೇವನೆ ಹಾಗೂ ಸಂಗ್ರಹಣೆಯ ಮಾಹಿತಿ ಆಧರಿಸಿ ಬಂಧಿಸಲು ತೆರಳಿದ್ದ ಸಿಸಿಬಿ ಪೊಲೀಸರ ಮೇಲೆ ಆಫ್ರಿಕಾದ ಪ್ರಜೆಗಳು ಹಲ್ಲೆಗೈದ ಘಟನೆ ಬೆಂಗಳೂರು ಗ್ರಾಮಾಂತರದ ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮಾವಳ್ಳಿಪುರದಲ್ಲಿ ವರದಿಯಾಗಿದೆ.
ಎ.17ರಂದು ಘಟನೆ ನಡೆದಿದ್ದು, ಸಿಸಿಬಿ ಇನ್‍ಸ್ಪೆಕ್ಟರ್ ಸುಬ್ರಹ್ಮಣ್ಯಸ್ವಾಮಿ ಸೇರಿದಂತೆ ಐದಕ್ಕೂ ಹೆಚ್ಚು ಸಿಬ್ಬಂದಿ ಮೇಲೆ ಹಲ್ಲೆ ನಡೆದಿದೆ.
ಮಾವಳ್ಳಿಪುರದ ಮನೆಯೊಂದರಲ್ಲಿ ಮಾದಕ ವಸ್ತುಗಳ ಸೇವನೆ, ಸಂಗ್ರಹಣೆಯ ಕುರಿತು ಮಾಹಿತಿ ಕಲೆ ಹಾಕಿದ್ದ ಸಿಸಿಬಿ ಪೊಲೀಸರ ತಂಡ, ಎ.17ರ ಗುರುವಾರ ರಾತ್ರಿ ಕಾರ್ಯಾಚರಣೆಗೆ ತೆರಳಿತ್ತು. ಈ ವೇಳೆ ತಪ್ಪಿಸಿಕೊಳ್ಳಲು ಮುಂದಾದ ಆರೋಪಿಗಳ ಗುಂಪು ಕಬ್ಬಿಣದ ರಾಡು, ಕಲ್ಲು, ಹೆಲ್ಮೆಟ್‍ಗಳಿಂದ ಪೊಲೀಸರ ಮೇಲೆ ದಾಳಿ ಮಾಡಿ ಪರಾರಿಯಾಗಲು ಯತ್ನಿಸಿದೆ.
ತಕ್ಷಣ ಸಿಸಿಬಿ ಪೊಲೀಸ್ ಸಿಬ್ಬಂದಿಗಳು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಕೂಡಲೇ ಘಟನಾ ಸ್ಥಳಕ್ಕೆ ಬಂದ ರಾಜಾನುಕುಂಟೆ ಠಾಣೆಯ ಹೊಯ್ಸಳ ಸಿಬ್ಬಂದಿ ಮೇಲೂ ಆರೋಪಿಗಳು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಸಿಸಿಬಿ ಘಟಕದ ಜೀಪ್ ಮತ್ತು ರಾಜಾನುಕುಂಟೆ ಪೊಲೀಸ್ ಠಾಣೆಯ ಹೊಯ್ಸಳ ಜೀಪಿನ ಗಾಜುಗಳು ಜಖಂಗೊಂಡಿವೆ ಎಂದು ಬೆಂಗಳೂರು ಗ್ರಾಮಾಂತರ ವಿಭಾಗದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ.
ಘಟನೆಯಲ್ಲಿ ಸಿಸಿಬಿ ಸಿಬ್ಬಂದಿ, ರಾಜಾನುಕುಂಟೆ ಠಾಣಾ ಸಿಬ್ಬಂದಿ ಸಹಿತ ನಾಲ್ವರಿಗೆ ಗಾಯಗಳಾಗಿವೆ. ಸಿಸಿಬಿ ಇನ್‍ಸ್ಪೆಕ್ಟರ್ ಸುಬ್ರಹ್ಮಣ್ಯ ಸ್ವಾಮಿ ನೀಡಿರುವ ದೂರಿನನ್ವಯ ರಾಜಾನುಕುಂಟೆ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಆರೋಪಿಗಳು ವಾಸವಿದ್ದ ಮನೆಯನ್ನು ಉತ್ತರ ಭಾರತ ಮೂಲದ ಮಹೇಶ್ ಗುಪ್ತಾ ಎಂಬಾತ ಮನೆ ಬಾಡಿಗೆಗೆ ನೀಡಿದ್ದ. ಆತ ಬಿಹಾರದಲ್ಲಿದ್ದು, ಆತನನ್ನೂ ಸಹ ಸಂಪರ್ಕಿಸಿ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದೇವೆ. ಆರೋಪಿಗಳ ಬಂಧನದ ಬಳಿಕ ಅವರು ಯಾವ ವೀಸಾದಡಿ ಭಾರತಕ್ಕೆ ಬಂದಿದ್ದರು?, ಅವಧಿ ಅಂತ್ಯವಾದ ಬಳಿಕವೂ ವಾಸವಿದ್ದರಾ? ವಿದೇಶಿಯರ ಪ್ರಾದೇಶಿಕ ನೋಂದಣಿ ಕೇಂದ್ರದಲ್ಲಿ ಮಾಹಿತಿ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ಸಿಬ್ಬಂದಿಯೊಂದಿಗೆ ತೆರಳಿ ಆರೋಪಿಗಳ ಹುಡುಕಾಟ ನಡೆಸಲಾಗುತ್ತಿದೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದಾರೆ.