ಗುಜರಾತಿನಲ್ಲಿ ಮುಸ್ಲಿಮರು ಮೀಸಲಾತಿ ಪಡೆಯುತ್ತಿರುವುದು ಮೋದಿ ಗಮನಕ್ಕೆ ಬರಲಿಲ್ಲವೇ?: ಬಿ.ಕೆ.ಹರಿಪ್ರಸಾದ್
ಬೆಂಗಳೂರು: ಗುಜರಾತಿನಲ್ಲಿ ಮುಸ್ಲಿಂ ಸಮುದಾಯದ 70 ಒಳ ಪಂಗಡಗಳು ಓಬಿಸಿ ಮೀಸಲಾತಿ ಪಡೆಯುತ್ತಿದ್ದರೂ, ಮೋದಿ ಮೂರು ಬಾರಿ ಮುಖ್ಯಮಂತ್ರಿ ಆಗಿರುವಾಗ ಗಮನಕ್ಕೆ ಬರಲಿಲ್ಲವೇ? ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ರವಿವಾರ ಎಕ್ಸ್ ಜಾಲತಾಣದಲ್ಲಿ ಮೋದಿಯವರ ಮಾಧ್ಯಮ ಸಂದರ್ಶನದ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು, ಕರ್ನಾಟಕದ ಓಬಿಸಿ, ಎಸ್ಸಿ, ಎಸ್ಟಿ ಸಮುದಾಯಗಳ ಮೀಸಲಾತಿಯ ಬಗ್ಗೆ ಮೋಸಳೆ ಕಣ್ಣೀರು ಸುರಿಸುತ್ತಿರುವ ನರೇಂದ್ರ ಮೋದಿ, ಗುಜರಾತಿನಲ್ಲಿ ಮುಸ್ಲಿಂ ಸಮುದಾಯಗಳು ಯಾವ ಕೆಟಗರಿಯಲ್ಲಿವೆ ಎಂದು ಅಪ್ಪಿತಪ್ಪಿ ಮಾಧ್ಯಮ ಸಂದರ್ಶನದಲ್ಲಿ ಹೇಳಿದ್ದ ಸತ್ಯವನ್ನೂ ಮರೆತಿದ್ದಾರೆ ಎಂದು ತಿಳಿಸಿದ್ದಾರೆ.
ಗುಜರಾತಿನಲ್ಲಿ ಮುಸ್ಲಿಮ್ ಸಮುದಾಯದ ಒಳ ಪಂಗಡಗಳು ಓಬಿಸಿ ಮೀಸಲಾತಿ ಪಡೆಯುತ್ತಿದ್ದರೂ, ಮೂರು ಬಾರಿ ಮುಖ್ಯಮಂತ್ರಿ ಆಗಿರುವಾಗ ಗಮನಕ್ಕೆ ಬರಲಿಲ್ಲವೇ? ಮುಸ್ಲಿಮ್ ಸಮುದಾಯಕ್ಕೆ ಮೀಸಲಾತಿ ನೀಡುವುದು ಪಾಪದ ಕೆಲಸ ಎನ್ನುವುದಾದರೇ, ನಿಮ್ಮ ಪಾಪದ ಪ್ರಮಾಣ ಎಷ್ಟು? ಎಂದು ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
ಕಳೆದ ಹತ್ತು ವರ್ಷಗಳಲ್ಲಿ ಸಾರ್ವಜನಿಕ ಕ್ಷೇತ್ರಗಳನ್ನ ಖಾಸಗೀಕರಣ ಮಾಡಿ, ಮೀಸಲಾತಿಯನ್ನೆ ಇಲ್ಲವಾಗಿಸಿದ ನಿಮ್ಮ ಹಿಡನ್ ಅಜೆಂಡಾ ದೇಶದ ಜನರೆದುರು ಬಯಲಾಗುತ್ತಲೇ ಇದೆ. ಓಬಿಸಿ ಸಮುದಾಯಗಳಿಗೆ ಮೀಸಲಾತಿ ನೀಡುವಾಗ ಬೀದಿಯಲ್ಲಿ ಮೈಗೆ ಬೆಂಕಿ ಹಚ್ಚಿಕೊಂಡು, ಮಂಡಲ್ ಆಯೋಗದ ವಿರುದ್ಧ ಕಮಂಡಲ ಸೃಷ್ಟಿಸಿದ ಬಿಜೆಪಿಯವರ ಮೀಸಲಾತಿ ವಿರೋಧಿ ಮನಸ್ಥಿತಿಯನ್ನ ಇತಿಹಾಸ ಮರೆತಿಲ್ಲ ಎಂದು ಅವರು ಟೀಕಿಸಿದ್ದಾರೆ.
ಮೀಸಲಾತಿಯ ವಿಷಯದಲ್ಲಿ ಹಗರುವಾಗಿ ಮಾತಾಡುವುದನ್ನ ಮೊದಲು ನಿಲ್ಲಿಸಿ, ಮೀಸಲಾತಿ ಸರಕಾರಿ ಕಾರ್ಯಕ್ರಮವಲ್ಲ, ಅದು ಶೋಷಿತ ಸಮುದಾಯಗಳ ಹಕ್ಕು. ಬಾಬಾ ಸಾಹೇಬರು ನೀಡಿದ ಆ ಹಕ್ಕನ್ನು ಕಾಂಗ್ರೆಸ್ ಪಕ್ಷ ಉಳಿಸಿದೆ, ಮುಂದೆಯೂ ಯಾವ ಬೆಲೆ ತೆತ್ತಾದರೂ ರಕ್ಷಿಸಲಿದೆ. ಮತಕ್ಕಾಗಿ ಹಾದಿಬೀದಿಯಲ್ಲಿ ದ್ವೇಷ ರಾಜಕಾರಣ ಮಾಡುತ್ತಾ, ಬೂಟಾಟಿಕೆ ಮಾತುಗಳಿಗೆ ಕಡಿವಾಣ ಹಾಕಿ. ಎಚ್ಚರ..! ಮೀಸಲಾತಿಯ ಕಿಚ್ಚಿಗೆ, ನಿಮ್ಮ ಅಧಿಕಾರ, ಅಹಂಕಾರ, ಹುದ್ದೆ ಆಹುತಿಯಾಗಲಿದೆ ಎಂದು ಹರಿಪ್ರಸಾದ್ ಎಚ್ಚರಿಸಿದ್ದಾರೆ.