ಪ್ರಜ್ವಲ್ ರೇವಣ್ಣ ವಿಚಾರವಾಗಿ ಆಮಿಷ :ಬಿಜೆಪಿ ಮುಖಂಡ ದೇವರಾಜೇಗೌಡ ಹೇಳಿಕೆ ಆಧರಿಸಿ ತನಿಖೆಗೆ ಲೋಕಾಯುಕ್ತಕ್ಕೆ ದೂರು
ಬೆಂಗಳೂರು: ಬಿಜೆಪಿ ಮುಖಂಡ ದೇವರಾಜೇಗೌಡರು ಮಾಧ್ಯಮದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ವಿಚಾರವಾಗಿ ಕೋಟ್ಯಂತರ ರೂ.ಹಣದ ಆಮಿಷ ಒಡ್ಡಿರುವ ಬಗ್ಗೆ ಪ್ರಸ್ತಾಪಿಸಿರುವ ಹಿನ್ನೆಲೆಯಲ್ಲಿ ಕೂಡಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕೆಂದು ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಪುಟ್ಟರಾಜು ವೈ. ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ದೇವರಾಜೇಗೌಡ ಎಂಬುವವರು ಮಾಧ್ಯಮಕ್ಕೆ ಸಂದರ್ಶನ ನೀಡುವ ವೇಳೆಯಲ್ಲಿ ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಹಾಗೂ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಅವರ ಕುಟುಂಬದ ವಿಷಯವನ್ನು ಪ್ರಸ್ತಾಪಿಸಿ ನನಗೆ 20, 50, 70 ಕೋಟಿ ರೂ.ಹಣದ ಆಮಿಷವನ್ನು ಒಡ್ಡಿದ್ದರೂ ಎಂದು ಅವರೇ ಬಹಿರಂಗವಾಗಿ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣನನ್ನು ಅನರ್ಹಗೊಳಿಸಲು ನಾನು ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಆಮಿಷ ಒಡ್ಡಿದ್ದರು ಎಂದು ದೇವರಾಜೇಗೌಡ ತಿಳಿಸಿದ್ದಾರೆ. ಅವರ ಹೇಳಿಕೆಯ ಆಧಾರದ ಹಿನ್ನೆಲೆಯಲ್ಲಿ ಕೂಡಲೇ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಯಾರು ಆಮಿಷ ಒಡ್ಡಿದರು, ಯಾರು ಎಷ್ಟು ಹಣವನ್ನು ನೀಡುತ್ತೇನೆ ಎಂದು ತಿಳಿಸಿದರು ಎಂಬುದರ ಬಗ್ಗೆ ತನಿಖೆ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪುಟ್ಟರಾಜು ವೈ. ದೂರಿನಲ್ಲಿ ತಿಳಿಸಿದ್ದಾರೆ.