ಲೈಂಗಿಕ ಹಗರಣ | ಕುಮಾರಕೃಪಾದಲ್ಲಿಯೇ ಸಂತ್ರಸ್ತ ಮಹಿಳೆಯರ ದಂಡು : ಕುಮಾರಸ್ವಾಮಿ
ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಆರೋಪ ಪ್ರಕರಣ ಸಂಬಂಧ 12 ಜನರ ನೊಂದ ಮಹಿಳೆಯರು ಎನ್ನಲಾದ ಮಹಿಳೆಯರನ್ನು ಕುಮಾರಕೃಪಾದಲ್ಲಿ ಇಟ್ಟಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಪ್ರಕರಣವನ್ನು ಸ್ವಾರ್ಥಕ್ಕಾಗಿ ಬಳಸಿಕೊಂಡ ವ್ಯಕ್ತಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್. ಎಲ್ಲ ಸಂಚು ಮಾಡಿ ಈಗ ಅನುಕಂಪ ತೋರಿಸ್ತಾ ಅಲ್ಲವೇ? ನಿಮ್ಮ ಯೋಗ್ಯತೆಗೆ ಈಗ ಏಕೆ ಅನುಕಂಪ? ಪೆನ್‍ಡ್ರೈವ್ ಲೀಕ್ ಮಾಡುವಾಗ ಆ ಮಹಿಳೆಯರ ಮುಖ ತೋರಿಸಿದ್ದೀರಿ. ಅವರ ಮಾನ ಮರ್ಯಾದೆಯನ್ನು ಹಾದಿ ಬೀದಿಯಲ್ಲಿ ಹರಾಜು ಹಾಕಿದ್ದೀರಿ. ಈಗ ನೋಡಿದರೆ ಅವರ ಬಗ್ಗೆ ಅನುಕಂಪ ತೋರಿಸುತ್ತಿರಿ. ನಾಚಿಕೆ ಆಗುವುದಿಲ್ಲವೇ ನಿಮಗೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ತುಂಬಲಾಗಿದ್ದ ಪೆನ್‍ಡ್ರೈವ್‍ಗಳನ್ನು ಹಾದಿಬೀದಿಯಲ್ಲಿ ಸುರಿದಿರುವ ದುಷ್ಕರ್ಮಿಗಳನ್ನು ರಾಜ್ಯ ಸರಕಾರ ರಕ್ಷಣೆ ಮಾಡುತ್ತಿದೆ. ಅದರಲ್ಲೂ ಡಿ.ಕೆ.ಶಿವಕುಮಾರ್ ಸಂಸ್ಕೃತಿ ಎಂಥದು ಎಂದು ಎಲ್ಲರಿಗೂ ಗೊತ್ತಿದೆ. ವಕೀಲ ದೇವರಾಜೇಗೌಡ ಜತೆ ಯಾಕಪ್ಪ ಮಾತಾನಾಡಿದೆ ನೀನು? ನಿನಗೇನಿತ್ತು ಅವರ ಹತ್ತಿರ ಕೆಲಸ ಎಂದು ಅವರು ಪ್ರಶ್ನಿಸಿದರು.
ಕಿಡ್ನಾಪ್ ಪ್ರಕರಣದಲ್ಲಿ ಏನೇನು ನಡೆದಿದೆ ಎನ್ನುವುದು ನನಗೆ ಗೊತ್ತಿದೆ. ನೊಂದ ಮಹಿಳೆ ರಾಜಗೋಪಾಲ್ ಎಂಬುವರ ತೋಟದ ಮನೆಯಲ್ಲಿ ಸಿಕ್ಕಿದರಾ? ಅಥವಾ ಅವರ ಸಂಬಂಧಿಕರ ಮನೆಯಲ್ಲಿ ಸಿಕ್ಕಿದರಾ? ಸಿಟ್ ಅಧಿಕಾರಿಗಳು ಹೇಳಬೇಕು. ಆ ಮಹಿಳೆ ಸಿಕ್ಕಿದ್ದು ಅವರ ಸಂಬಂಧಿಕರ ಮನೆಯಲ್ಲಿ. ಹುಣಸೂರಿನ ಪವಿತ್ರಾ ಎಂಬುವವರ ಮನೆಯಿಂದ ಕರೆದುಕೊಂಡು ಬಂದಿದ್ದಾರೆ ಎಂದು ದೂರಿದರು.
ಕಾರ್ತಿಕ್‍ಗೆ ತರಬೇತಿ: ಈ ಪ್ರಕರಣದ ಸೂತ್ರದಾರ ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್‍ನನ್ನು ಖಾಸಗಿ ಸುದ್ದಿವಾಹಿನಿಯಲ್ಲಿ ಕೂರಿಸಿ ಸೂಕ್ತ ತರಬೇತಿ ಕೊಡುವ ಕೆಲಸ ನಡೆಯುತ್ತಿದೆ. ಈ ತನಿಖೆಯ ದಿಕ್ಕು ಎತ್ತ ಸಾಗುತ್ತಿದೆ ಎನ್ನುವುದು ಅರ್ಥವಾಗುತ್ತಿದೆ ಎಂದು ಕುಮಾರಸ್ವಾಮಿ ತಿಳಿಸಿದರು.