ಬಿಜೆಪಿಯ ಐಟಿ ಸೆಲ್‍ನಲ್ಲಿ ಆಟ ಆಡುವ ಮಕ್ಕಳನ್ನು ತಂದು ಕೂರಿಸಿದಂತಿದೆ : ಕಾಂಗ್ರೆಸ್ ವ್ಯಂಗ್ಯ
ಬೆಂಗಳೂರು : ಬಿಜೆಪಿಯ ಐಟಿ ಸೆಲ್‍ನಲ್ಲಿ ಆಟ ಆಡುವ ಮಕ್ಕಳನ್ನು ತಂದು ಕೂರಿಸಿದಂತಿದೆ. ಸರಕಾರ ನಡೆಸುವಾಗ ಆಡಳಿತಾತ್ಮಕ ವಿಷಯಗಳ ಬದಲು ಲೂಟಿಯತ್ತಲೇ ಗಮನ ಹರಿಸಿದ ಬಿಜೆಪಿಗೆ ಆಡಳಿತದ ಸೂಕ್ಷ್ಮ ವಿಷಯಗಳ ಅರಿವು ಬರಲು ಹೇಗೆ ಸಾಧ್ಯ ಎಂದು ಕಾಂಗ್ರೆಸ್ ಕಿಡಿಗಾರಿದೆ.
ಬುಧವಾರ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಕಾಂಗ್ರೆಸ್, ಟಿಎಂಎಲ್ ಸ್ಮಾರ್ಟ್ ಸಿಟಿ ಮೊಬಿಲಿಟಿ ಸಲ್ಯೂಷನ್ಸ್ ಲಿಮಿಟೆಡ್ ಎಂಬ ಸಂಸ್ಥೆ ವಿದ್ಯುತ್ ಚಾಲಿತ ಬಸ್ಸುಗಳ ಸೇವೆ ಒದಗಿಸುವ ಒಪ್ಪಂದ ಮಾಡಿಕೊಂಡಿದೆ. ಬಸ್ಸುಗಳು, ಅದರ ಚಾಲಕ, ನಿರ್ವಾಹಕರ ನಿಯೋಜನೆ, ವೇತನ ಮುಂತಾದ ಎಲ್ಲ ವಿಷಯಗಳ ಹೊಣೆಯೂ ಆ ಸಂಸ್ಥೆಯದ್ದೆ ಆಗಿರುತ್ತದೆ ಎಂದು ತಿಳಿಸಿದೆ.
ಆ ಸಂಸ್ಥೆಯು ತನ್ನ ಚಾಲಕರಿಗೆ ನೀಡುವ ವೇತನದಲ್ಲಿ ವ್ಯತ್ಯಯ ಆಗಿರುವ ಕಾರಣ ಚಾಲಕರು ಸಂಸ್ಥೆಯ ವಿರುದ್ಧ ಪ್ರತಿಭಟನೆ ನಡೆಸಿದ್ದರ ಪರಿಣಾಮ ಎಲೆಕ್ಟ್ರಿಕ್ ಬಸ್ಸುಗಳ ಸೇವೆಯಲ್ಲಿ ವ್ಯತ್ಯಯ ಆಗಿರುತ್ತದೆ. ಈ ಸೇವೆಯು ಸಂಪೂರ್ಣ ಸದರಿ ಸಂಸ್ಥೆಯ ಜವಾಬ್ದಾರಿಯಾಗಿದ್ದರೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಷಯ ತಿಳಿದ ತಕ್ಷಣವೇ ಹೆಚ್ಚುವರಿ ಬಸ್ಸುಗಳನ್ನು ನಿಯೋಜಿಸಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಂಡಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
ಅಲ್ಲದೆ ಅಧಿಕಾರಿಗಳು, ಸಂಸ್ಥೆಯ ಪ್ರತಿನಿಧಿಗಳು ಚಾಲಕರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಂಡಿದ್ದಾರೆ. ಅಲ್ಲದೆ ಸದರಿ ಸಂಸ್ಥೆಗೆ ನೋಟಿಸ್ ಜಾರಿ ಮಾಡಿ ಮುಂದಿನ ದಿನಗಳಲ್ಲಿ ಈ ರೀತಿ ವ್ಯತ್ಯಯ ಆಗದಂತೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಸದ್ಯ ಎಲೆಕ್ಟ್ರಿಕ್ ಬಸ್ಸುಗಳ ಸೇವೆಯು ಸರಾಗವಾಗಿ ನಡೆಯುತ್ತಿದ್ದು, ಯಾವುದೇ ಸಮಸ್ಯೆ ಇಲ್ಲದೆ ಪ್ರಯಾಣಿಕರಿಗೆ ಸೇವೆ ಒದಗಿಸಲಾಗುತ್ತಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ವಿಷಯದ ಅರಿವಿಲ್ಲದೆ ಆರೋಪಿಸುವ ರಾಜ್ಯ ಬಿಜೆಪಿ ಆಡಳಿತದಲ್ಲಿ ಸಾರಿಗೆ ನೌಕರರು ಐತಿಹಾಸಿಕ ಪ್ರತಿಭಟನೆ ನಡೆಸಿದ್ದನ್ನು ಮರೆತಿದೆಯೇ? ನೌಕರರ ಮಕ್ಕಳು ‘ಸಂಬಳ ಕೊಡಿ ಸಿಎಂ ಅಂಕಲ್’ ಎಂದು ಗೋಳಾಡಿದ್ದನ್ನು ಮರೆತಿದ್ದಾರೆಯೇ? ಪ್ರತಿಭಟನೆ ನಡೆಸಿದ್ದ ಸಾರಿಗೆ ನೌಕರರ ಮೇಲೆ ದ್ವೇಷದಿಂದ ನೌಕರಿ ಕಿತ್ತುಕೊಂಡಿದ್ದನ್ನು ಮರೆತಿದೆಯೇ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.