ಪೆನ್ಡ್ರೈವ್ ಹಂಚಿದವರಿಗೆ ಶಿಕ್ಷೆಯಾಗಲಿ : ಬಂಡಾಯ ಸಾಹಿತ್ಯ ಸಂಘಟನೆ ಒತ್ತಾಯ
Photo : NDTV
ಬೆಂಗಳೂರು: ರಾಜ್ಯದಲ್ಲಿ ಮಹಿಳೆಯರ ಮಾನ ತೆಗೆದ ಹಾಸನ ಪೆನ್ಡ್ರೈವ್ ಪ್ರಕರಣ ದೇಶವ್ಯಾಪಿ ಹರಡಿದ್ದು, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಅತ್ಯಾಚಾರ ಮಾಡಿದವರು, ಪೆನ್ಡ್ರೈವ್ ಹಂಚಿದವರು ಕಠಿಣ ಶಿಕ್ಷೆಗೆ ಗುರಿಯಾಗಬೇಕು ಎಂದು ಬಂಡಾಯ ಸಾಹಿತ್ಯ ಸಂಘಟನೆ ಒತ್ತಾಯಿಸಿದೆ.
ಗುರುವಾರ ಸಂಘಟನೆಯ ಸದಸ್ಯರು, ಬಂಡಾಯ ಸಾಹಿತಿಗಳಾದ ಪ್ರೊ.ಬರಗೂರು ರಾಮಚಂದ್ರಪ್ಪ, ಡಾ.ಜಿ.ರಾಮಕೃಷ್ಣ, ಸುಕನ್ಯಾ ಮಾರುತಿ, ಕೆ.ಶರೀಫಾ, ಭಕ್ತರಹಳ್ಳಿ ಕಾಮರಾಜ್, ಡಾ.ರಾಜಪ್ಪ ದಳವಾಯಿ, ಆರ್.ಜಿ.ಹಳ್ಳಿ ನಾಗರಾಜ್, ಡಾ.ಎಚ್.ಎಲ್. ಪುಷ್ಪಾ, ರಾಜಶೇಖರ ಮೂರ್ತಿ ಸೇರಿದಂತೆ ಮತ್ತಿತರರು ಪತ್ರಿಕಾ ಹೇಳಿಕೆ ನೀಡಿದ್ದು, ಹಾಸನ ಪೆನ್ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿ ಲೈಂಗಿಕ ದೌರ್ಜನ್ಯ ಮಾಡಿದವರಿಗೆ ಯಾವುದೇ ರಿಯಾಯಿತಿ ಇಲ್ಲ. ಕಾನೂನಾತ್ಮಕ ಕಠಿಣ ಕ್ರಮವೇ ಆದ್ಯತೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪೆನ್ಡ್ರೈವ್ನಲ್ಲಿರುವ ಮಹಿಳೆಯರ ಭವಿಷ್ಯದ ಬಗ್ಗೆ ಕಾಳಜಿ ವಹಿಸದಿದ್ದರೆ ಈ ಪ್ರಕರಣವನ್ನು ಕುರಿತ ಬದ್ಧತೆಯು ಅಪೂರ್ಣವಾಗುತ್ತದೆ. ಈ ಮಹಿಳೆಯರಲ್ಲಿ ಅನೇಕರು ಕುಟುಂಬದಲ್ಲಿ ಅನಾಥ ಪ್ರಜ್ಞೆ ಅನುಭವಿಸುತ್ತಿರುತ್ತಾರೆ. ಮನೆಯವರಲ್ಲದೆ ಇತರರ ಹೀಯಾಳಿಕೆಗೂ ಒಳಗಾಗುತ್ತಾರೆ. ಒಂದು ರೀತಿಯ ಸಾಮಾಜಿಕ ಬಹಿಷ್ಕಾರದ ಭಾವನೆಯಿಂದ ಕುಗ್ಗಿ ಹೋಗಿರುತ್ತಾರೆ ಎಂದು ಅವರು ಹೇಳಿದ್ದಾರೆ.
ಹೇಗಿದ್ದರೂ ಸಂತ್ರಸ್ಥೆಯರ ಗುರುತು ತನಿಖಾ ತಂಡಕ್ಕೆ ಗೊತ್ತಿರುವುದರಿಂದ ಸಂತ್ರಸ್ಥ ಮಹಿಳೆಯರಿಗೆ ಧೈರ್ಯ ತುಂಬುವ, ಸಾಂತ್ವನ ಹೇಳುವ, ಕುಟುಂಬದವರಿಗೂ ಮನವರಿಕೆ ಮಾಡುವ ಕೆಲಸವೂ ಮುಖ್ಯವಾಗಬೇಕು. ಬಲತ್ಕಾರಕ್ಕೆ ಒಳಗಾದವರ ಬದುಕು ಉಳಿಯುವುದಕ್ಕೆ ಬೇಕಾದ ಕ್ರಮಗಳು ತನಿಖೆಯ ಕಾಳಜಿಯಾಗಬೇಕು. ಈ ದಿಕ್ಕಿನಲ್ಲಿಯೂ ಸರಕಾರ ಜರೂರಾಗಿ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರೇಮದ ಕಾರಣ ಹೇಳಿ ಹೆಣ್ಣು ಮಕ್ಕಳ ಹತ್ಯೆ ಮಾಡುವ ಪ್ರಕರಣಗಳು ನಡೆಯುತ್ತಿವೆ. ಇಂತಹ ಕ್ರೌರ್ಯಕ್ಕೆ ತಕ್ಕ ಹಾಗೂ ತ್ವರಿತ ಕ್ರಮ ಕೈಗೊಳ್ಳುವ ಕುರಿತು ಸರಕಾರವು ಆದ್ಯತೆ ನೀಡಬೇಕು. ಮುಂಚಿತವಾಗಿ ವಿಶೇಷ ಸುಳಿವು ಇದ್ದು ಮುಂಜಾಗ್ರತೆ ವಹಿಸಿಲ್ಲದಿದ್ದರೆ ಅಂತಹ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಸಾಹಿತಿಗಳು ಆಗ್ರಹಿಸಿದ್ದಾರೆ.