ವಿಧಾನಸೌಧದ ಪ್ರವೇಶ ದ್ವಾರಗಳಲ್ಲಿ ಭದ್ರತೆ ಹೆಚ್ಚಳ : ಗೃಹ ಸಚಿವ ಜಿ.ಪರಮೇಶ್ವರ್
ಬೆಂಗಳೂರು: ವಿಧಾನಸೌಧದ ಪ್ರವೇಶ ದ್ವಾರಗಳಲ್ಲಿ ಭದ್ರತೆ ಅನ್ನು ಮತ್ತಷ್ಟು ಹೆಚ್ಚಳ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಶುಕ್ರವಾರ ಇಲ್ಲಿನ ವಿಧಾನಸೌಧದಲ್ಲಿ ಹೊಸದಾಗಿ ಅಳವಡಿಸಿರುವ ಮೆಟಲ್ ಡಿಟೆಕ್ಟರ್, ಬ್ಯಾಗ್ ಸ್ಕ್ಯಾನರ್ ಗಳನ್ನು ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ವಿಧಾನಸೌಧ ಭದ್ರತಾ ವಿಭಾಗದ ವ್ಯಾಪ್ತಿಗೆ ಬರುವ ವಿಧಾನಸೌಧದ ಪ್ರವೇಶ ದ್ವಾರಗಳಲ್ಲಿ ಹೊಸದಾಗಿ ಉನ್ನತ ಗುಣಮಟ್ಟದ ಬ್ಯಾಗ್ ಸ್ಕ್ಯಾನರ್, ಮೆಟಲ್ ಡಿಟೆಕ್ಟರ್, ಕ್ಯೂಆರ್ ಕೋಡ್ ಯಂತ್ರ ಸೇರಿದಂತೆ ಇನ್ನಿತರ ಉಪಕರಣಗಳನ್ನು ಭದ್ರತೆಗೆ ಅಳವಡಿಸಲಾಗಿದೆ ಎಂದು ತಿಳಿಸಿದರು.
ಆನ್ಲೈನ್ ಮೂಲಕ ವಿಧಾನಸೌಧ ಪ್ರವೇಶದ ಪಾಸ್ಗಳನ್ನು ವಿತರಿಸಲಾಗುತ್ತದೆ. ಪಾಸ್ ಮತ್ತು ಗುರುತಿನ ಕಾರ್ಡ್ಗಳನ್ನು ಪರಿಶೀಲನೆ ನಡೆಸಲಾಗುತ್ತದೆ. ಆನ್ಲೈನ್ ಮೂಲಕ ಪಡೆದ ಕ್ಯೂಆರ್ ಕೋಡ್ ಪಾಸ್ಗಳನ್ನು ಪರಿಶೀಲಿಸಲಿದ್ದಾರೆ. ಗುಣಮಟ್ಟದ ಉಪಕರಣಗಳನ್ನು ಅಳವಡಿಸಿರುವುದರಿಂದ, ಯಾರಾದರು ಅನುಮಾನಸ್ಪದ ವಸ್ತುಗಳನ್ನು ತೆಗೆದುಕೊಂಡು ಬಂದರೆ ಪತ್ತೆಹಚ್ಚಲು ಸುಲಭವಾಗುತ್ತವೆ ಎಂದರು.
ಈ ಎಲ್ಲ ಉಪಕರಣಗಳು ಮೂರು ವರ್ಷದ ಹಿಂದೆಯೇ ಹಾಳಾಗಿದ್ದವು. ನಾವು ಈಗ ಅಳವಡಿಸಿದ್ದೇವೆ. ಸುರಕ್ಷತೆ ದೃಷ್ಟಿಯಿಂದ ಅವಶ್ಯಕತೆ ಇತ್ತು ಎಂದ ಅವರು, ಸಾರ್ವಜನಿಕರು ಪೂರ್ವಭಾಗದ ಗೇಟ್ನಿಂದ ಬರಬೇಕು. ಪಶ್ಚಿಮ ದ್ವಾರದಿಂದ ಗಣ್ಯರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ವಿಧಾನಸೌಧಕ್ಕೆ ಭದ್ರತೆಯನ್ನು ಇನ್ನಷ್ಟು ಕಠಿಣ ಮಾಡಬೇಕು ಎಂದು ನಗರ ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಲಾಗಿದೆ ಎಂದೂ ಅವರು ಹೇಳಿದರು.