ಕೃಷಿ ಸಚಿವರೇ ಎಲ್ಲಿದ್ದಿರಪ್ಪ? : ಜೆಡಿಎಸ್ ಕಿಡಿ
ಬೆಂಗಳೂರು : ‘ಸರಕಾರದ ಕೆಲಸ ದೇವರ ಕೆಲಸ’ ಎಂದು ಕೆಂಗಲ್ ಹನುಮಂತಯ್ಯನವರು ವಿಧಾನಸೌಧದ ಮೇಲೆ ಬರೆಸಿರುವ ಈ ಧ್ಯೇಯವಾಕ್ಯವನ್ನು ಕಾಂಗ್ರೆಸ್ ಸರಕಾರ ಗಾಳಿಗೆ ತೂರಿದೆ. ಜನರ ಕೆಲಸವನ್ನು ದೇವರ ಕೆಲಸದಂತೆ ಶ್ರದ್ಧೆಯಿಂದ ಮಾಡಬೇಕಿದ್ದ ಕರ್ತವ್ಯವನ್ನು ಸರಕಾರ ಮರೆತುಬಿಟ್ಟಿದೆ’ ಎಂದು ಜೆಡಿಎಸ್ ಟೀಕಿಸಿದೆ.
ಮಂಗಳವಾರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಜೆಡಿಎಸ್, ‘3 ತಿಂಗಳಿಂದ ಅನ್ನಭಾಗ್ಯ ಹಣ ಸ್ಥಗಿತ, ಬಿತ್ತನೆ ಬೀಜ ದರ ಶೇ.60-70ರಷ್ಟು ಏರಿಕೆ, ಕೊಪ್ಪಳದಲ್ಲಿ ಸರ್ಜರಿಗೆ 3 ತಿಂಗಳು ಕಾಯಬೇಕು, ಕಾವೇರಿಗೆ ಸರ್ವರ್ ಸಮಸ್ಯೆ, ಕೃಷಿ ಸಚಿವರೇ ಎಲ್ಲಿದ್ದಿರಪ್ಪ?’ ಎಂದು ಖಾರವಾಗಿ ಪ್ರಶ್ನಿಸಿದೆ.
ಬಿತ್ತನೆ ಬೀಜದ ದರ ಹೆಚ್ಚಳ: ಬಿತ್ತನೆ ಬೀಜದ ದರ ಏರಿಕೆ ಮಾಡಿದ್ದು, ಗ್ಯಾರಂಟಿ ಕೊಟ್ಟು ಜನರನ್ನು ಉದ್ಧಾರ ಮಾಡಿದೆ ಎಂದು ಬೀಗುವ ಕಾಂಗ್ರೆಸ್ ಸರಕಾರ ಮಾಡಿರುವ ಘನ ಕಾರ್ಯ ಇದು. ಒಂದು ಕೈಯ್ಯಲ್ಲಿ ಗ್ಯಾರಂಟಿ, ಇನ್ನೊಂದು ಕೈಯ್ಯಲ್ಲಿ ಸುಲಿಗೆ ಮಾಡುತ್ತಿರುವ ಘನಕಾರ್ಯವಿದು! ಕೊಟ್ಟ ಹಾಗೆ ಕೊಟ್ಟು ಜನರಿಗೆ ಗೊತ್ತೇ ಆಗದಂತೆ ಜೇಬಿಗೆ ಕೈ ಹಾಕಿ ಪಿಕ್ ಪಾಕೆಟ್ ಮಾಡುತ್ತಿರುವ ಕಿಡಿಗೇಡಿ ಕೆಲಸ ಇದು ಎಂದು ಜೆಡಿಎಸ್ ದೂರಿದೆ.
‘ಕೃಷಿ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಲಭ್ಯವಿದ್ದ ಬಿತ್ತನೆ ಬೀಜದ ಬೆಲೆ ಏರಿಕೆಯಾದ ಪರಿಣಾಮ, ಮುಕ್ತ ಮಾರುಕಟ್ಟೆಯಲ್ಲಿಯೂ ದರ ದುಪ್ಪಟ್ಟಾಗಿದೆ. ತಕ್ಷಣವೇ ಸರಕಾರ ಬಿತ್ತನೆ ಬೀಜದ ದರ ಇಳಿಕೆಗೆ ಕ್ರಮ ಕೈಗೊಳ್ಳಬೇಕು ಮತ್ತು ಮುಕ್ತ ಮಾರುಕಟ್ಟೆಯಲ್ಲಿ ದರ ಏರಿಕೆಗೆ ನಿಯಂತ್ರಣ ವಿಧಿಸಬೇಕು. ಕೃಷಿ ಸಚಿವರೇ.. ಎಲ್ಲಿದ್ದೀರಪ್ಪ?’ ಎಂದು ಪ್ರಶ್ನಿಸಿದೆ.
‘ಗೃಹಜ್ಯೋತಿ’ ನೋಂದಣಿಗೂ ಲಂಚ: ‘ಪಿಕ್ ಪಾಕೆಟ್ ಗ್ಯಾರಂಟಿ, ಕಾಂಗ್ರೆಸ್ ಸರಕಾರದ ಅಸಲಿ ಮುಖ ಅನಾವರಣ ಆಗಿದೆ ನೋಡಿ ಇಲ್ಲಿ. ಗೃಹಜ್ಯೋತಿ ನೋಂದಣಿಗೂ ಲಂಚ ಪೀಕಿದ ಈ ಸರಕಾರಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ’ ಎಂದು ಜಾತ್ಯತೀತ ಜನತಾದಳ(ಜೆಡಿಎಸ್) ಇಂದಿಲ್ಲಿ ಲೇವಡಿ ಮಾಡಿದೆ.
ಎಕ್ಸ್ ನಲ್ಲಿ ಮತ್ತೊಂದು ಪೋಸ್ಟ್ ಹಾಕಿರುವ ಜೆಡಿಎಸ್, ‘ಸರಕಾರವೇ ದುಡ್ಡು ಕೊಟ್ಟು ಮಾಡಿಸಿಕೊಂಡ ಸಮೀಕ್ಷೆಯಲ್ಲಿ ಸರಕಾರದ ಲಂಚಾವತಾರ ಬಯಲಾಗಿದೆ. ಶೇ.24.14ರಷ್ಟು ಫಲಾನುಭವಿಗಳು ಲಂಚ ಕೊಟ್ಟು ಗೃಹಜ್ಯೋತಿಗೆ ನೋಂದಾಯಿಸಿಕೊಂಡಿದ್ದರು ಎಂದು ಸಮೀಕ್ಷೆ ಹೇಳಿದೆ, ನಾಚಿಕೆಗೇಡು’ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ನಾನು ಇಲ್ಲೇ ಇದ್ದೇನೆ: ನಾನು ಇಲ್ಲೇ ಕರ್ನಾಟಕ ರಾಜ್ಯದಲ್ಲೇ ಇದ್ದೇನೆ. ಯಾವಾಗ ಬೇಕಿದ್ದರೂ ಸಂಪರ್ಕಕ್ಕೆ ಸಿಗುತ್ತೇನೆ. ಕಳೆದ ಸಾಲಿನಲ್ಲಿ ಆಹಾರಧಾನ್ಯಗಳ ಮಾರಾಟ ದರ ಶೇ.40ರಷ್ಟು ಏರಿಕೆಯಾಗಿದೆ. ಬಿತ್ತನೆಬೀಜ ಖರೀದಿ ಮೇಲೂ ಇದರ ಪರಿಣಾಮ ಬೀರಿದೆ ಹಾಗಿದ್ದೂ ನಾವು ಬಿತ್ತನೆ ಬೀಜಕ್ಕೆ ಶೇ.30 ದರ ಏರಿಸಿದ್ದೇವೆ. ಖರೀದಿ, ಗುಣಮಟ್ಟ ನಿಯಂತ್ರಣ, ಸಂಸ್ಕರಣೆ, ಪ್ರಯೋಗಾಲಯದಲ್ಲಿ ಪರೀಕ್ಷೆ, ಗ್ರೇಡಿಂಗ್, ದಾಸ್ತಾನು ಮಾಡುವುದು, ಸಾಗಾಟ, ಬೀಜ ಪ್ರಮಾಣಿಕರಣ, ಕಾರ್ಮಿಕರ ಕೂಲಿ ಹಣ ಎಲ್ಲ ಸೇರಿಸಿ ಬಿತ್ತನೆ ಬೀಜದ ಮಾರಾಟ ದರ ನಿಗದಿ ಯಾಗುತ್ತದೆ. ಬಿತ್ತನೆ ಬೀಜವನ್ನು ಸರಕಾರ ಹಾಗೂ ಖಾಸಗಿ ಸಂಸ್ಥೆಗಳು ನೇರವಾಗಿ ರೈತ ಬೀಜೋತ್ಪಾದಕರಿಂದ ಖರೀದಿಸುತ್ತಿವೆ. ಬೆಲೆ ಹೆಚ್ಚಳದ ಲಾಭವೂ ರೈತ ಬಿಜ ಉತ್ಪಾದಕರಿಗೇ ವರ್ಗಾವಣೆ ಆಗುತ್ತಿದೆ. ನೆರೆಯ ಮಹಾರಾಷ್ಟ್ರದಲ್ಲಿಯೂ ನಮ್ಮ ರಾಜ್ಯಕ್ಕಿಂತ ಹೆಚ್ಚಿನ ದರ ನಿಗಧಿ ಮಾಡಲಾಗಿದೆ. ರಾಜ್ಯದಲ್ಲಿ ಅತೀ ಹೆಚ್ಚು ಬೆಳೆಯುವ ಶೇಂಗಾದ ಬಿತ್ತನೆಬೀಜದ ಬೆಲೆ ಶೇ.1ರಷ್ಟು ಮಾತ್ರ ಏರಿಕೆಯಾಗಿದೆ. ಹಾಗೇ ಸೊಯಾಬೀನ್ ಬಿತ್ತನೆ ಬೀಜದ ಮಾರಾಟ ದರ ಶೇ.8 ಇಳಿಕೆಯಾಗಿದೆ. ರೈತರ ಹಿತ ನಮ್ಮ ಆದ್ಯತೆ’-
ಎನ್.ಚಲುವರಾಯಸ್ವಾಮಿ ಕೃಷಿ ಸಚಿವ