ನನ್ನ ಹೆಸರಿಗೆ ಮಸಿ ಬಳಿಯಲು ಬಿಜೆಪಿ ಹುನ್ನಾರ : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ನನ್ನ ಹೆಸರಿಗೆ ಮಸಿ ಬಳಿಯುವುದು, ರಾಜ್ಯ ಸರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿರುದ್ಧವೆಂದು ಬಿಂಬಿಸುವುದು ಬಿಜೆಪಿಯವರ ಹುನ್ನಾರವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಶುಕ್ರವಾರ ವಿಧಾನಸಭೆಯ ಕಲಾಪದಲ್ಲಿ ವಾಲ್ಮೀಕಿ ನಿಗಮದ ಪ್ರಕರಣ ಸಂಬಂಧ ಉತ್ತರ ನೀಡುವ ವೇಳೆಯಲ್ಲಿ ಮಾತನಾಡಿದ ಅವರು, ಇಡೀ ಬಿಜೆಪಿ, ಬಿಜೆಪಿಯ ನಾಯಕತ್ವ ಸಂವಿಧಾನ ಜಾರಿಗೆ ಬಂದ ದಿನದಿಂದಲೂ ದಮನಿತ ಸಮುದಾಯಗಳ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿರುದ್ಧವಾಗಿದೆ. ಮಹಿಳೆಯರ ವಿರುದ್ಧವಾಗಿದೆ ಎಂದರು.
ದಮನಿತರ ಪರವಾದ ಪ್ರತಿ ನಿಲುವು, ಪ್ರತಿ ಕಾಯ್ದೆ, ಯೋಜನೆಗಳನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ ನೇತೃತ್ವದ ಸರಕಾರಗಳು, ಆದರೆ, ಈ ಬಿಜೆಪಿಯಿಂದ ಸಂವಿಧಾನವನ್ನು ತುಳಿಯುವ ಪ್ರಯತ್ನಗಳಾಗಿವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಬಿಜೆಪಿ ಆಡಳಿತದಲ್ಲಿದ್ದಾಗ ಯಾವ ಯಾವ ನಿಗಮಗಳಲ್ಲಿ ಏನೆಲ್ಲಾ ನುಂಗಿದ್ದಾರೆ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ನುಂಗುವುದರಲ್ಲಿ ಜಾಣರಾಗಿರುವ ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಇದಕ್ಕಿಂತ ದುರಂತ ಬೇರೆ ಇಲ್ಲ. ವಿರೋಧ ಪಕ್ಷದವರು ತಮ್ಮ ಅಜೆಂಡಾ ಸಾಧಿಸಿಕೊಳ್ಳಲು ಯಾವ ಸುಳ್ಳನ್ನು ಬೇಕಾದರೂ ಹೇಳಬಲ್ಲರು ಎಂಬುದು ಸಾಬೀತಾಗಿದೆ ಎಂದು ಸಿದ್ದರಾಮಯ್ಯ ಹರಿಹಾಯ್ದರು.
ಸರಕಾರವು ಸಿಬಿಐನವರು ಎಫ್‍ಐಆರ್ ದಾಖಲಿಸಿದ ಮೇಲೆ ಸಿಟ್ ರಚಿಸಿದೆ ಎಂದು ವಿಜಯೇಂದ್ರ ಸುಳ್ಳು ಹೇಳಿಕೆ ನೀಡಿದ್ದಾರೆ. ವಾಸ್ತವವಾಗಿ ನಮ್ಮಲ್ಲಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ 2024ರ ಮೇ 28ರಂದು ಕ್ರೈಂ ನಂ. 118/2024 ರಂತೆ ಎಫ್‍ಐಆರ್ ದಾಖಲಾಗಿದೆ. ರಾಜ್ಯ ಸರಕಾರವು ಮೇ 31ರಂದು ಆದೇಶ ಹೊರಡಿಸಿ ಸಿಟ್ ರಚಿಸಿದೆ. ಸಿಬಿಐ ಜೂನ್ 3ರಂದು ಎಫ್‍ಐಆರ್ ದಾಖಲಿಸಿದೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು.
ಈ ಹಗರಣವನ್ನು ಎಸ್‍ಐಟಿ ಜೊತೆಗೆ ಸಿಬಿಐ ಹಾಗೂ ಈಡಿ ಸಂಸ್ಥೆಗಳೂ ತನಿಖೆಯನ್ನು ನಡೆಸುತ್ತಿವೆ. ಈ ಹಗರಣದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ ಹಾಗೂ ನಿಗಮದ ಖಾತೆಯಿಂದ ಯಾರ ಖಾತೆಗಳಿಗೆ ಹಣ ವರ್ಗಾವಣೆಯಾಗಿರುತ್ತದೆ ಹಾಗೂ ಇದರ ಮೂಲ ಫಲಾನುಭವಿಗಳು ಯಾರು ಎಂಬುದು ತನಿಖೆಯು ಪೂರ್ಣಗೊಂಡ ನಂತರವೇ ತಿಳಿಯುತ್ತದೆ. ಪ್ರಕರಣದಲ್ಲಿ ಯಾರೇ ಇದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.
ಸರಕಾರಕ್ಕೆ ಬೆದರಿಕೆ: ‘ದೇಶದಲ್ಲೇ ಮೊದಲ ಬಾರಿಗೆ ಎಸ್‍ಸಿಪಿ/ಟಿಎಸ್‍ಪಿ ಕಾಯ್ದೆ ಜಾರಿಗೆ ತರುವ ಮೂಲಕ ಪರಿಶಿಷ್ಟರ ಕಲ್ಯಾಣಕ್ಕೆ ಸರಕಾರ ಹಣ ಮೀಸಲಿಟ್ಟಿದೆ. ಅಲ್ಲದೆ, ಪರಿಶಿಷ್ಟರಿಗೆ ಗುತ್ತಿಗೆಯಲ್ಲಿ ಮೀಸಲಾತಿ ಕಲ್ಪಿಸಿದ್ದು, ಭಡ್ತಿಯಲ್ಲಿಯೂ ಮೀಸಲಾತಿ ನೀಡಲಾಗಿದೆ. ನಮ್ಮ ಸರಕಾರ ಯಾವುದೇ ಜಾತಿ, ಧರ್ಮವನ್ನು ನೋಡದೆ ಎಲ್ಲ ವರ್ಗದವರ ಒಳಿತಿಗೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಗೊಳಿಸುತ್ತಿದೆ. ನಮ್ಮ ಒಳ್ಳೆಯ ಕಾರ್ಯವನ್ನು ಸಹಿಸಲು ಆಗದೆ ಈಡಿ ಸೇರಿ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಬೆದರಿಕೆ ಹಾಕಲಾಗುತ್ತಿದೆ. ಬಿಜೆಪಿಗೆ ಎಸ್‍ಸಿ, ಎಸ್‍ಟಿ, ಒಬಿಸಿ, ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಪರ ಯಾವುದೇ ಬದ್ಧತೆ ಇಲ್ಲ’ ಎಂದು ಹೇಳಿದರು.