ಧರ್ಮರಾಯಸ್ವಾಮಿ ದೇಗುಲ ಒತ್ತುವರಿ ತೆರವಿಗೆ ಕ್ರಮ : ರಾಮಲಿಂಗಾರೆಡ್ಡಿ
ಬೆಂಗಳೂರು : ನೀಲಸಂದ್ರದಲ್ಲಿ ಒತ್ತುವರಿಯಾಗಿರುವ ಧರ್ಮರಾಯಸ್ವಾಮಿ ದೇವಾಲಯದ ಜಾಗವನ್ನು ತೆರವುಗೊಳಿಸಿ, ಆ ಜಾಗವನ್ನು ಉಳಿಸುವ ಕೆಲಸ ಮಾಡಲಾಗುತ್ತದೆ ಎಂದು ಮುಜಿರಾಯಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಬುಧವಾರ ವಿಧಾನ ಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಸಚಿವರು, ಧರ್ಮರಾಯಸ್ವಾಮಿ ದೇವಾಲಯದ ಜಾಗ 15.12 ಎಕರೆ ಇದ್ದು, 211 ಜನ 6 ಎಕರೆ ಒತ್ತುವರಿ ಮಾಡಿದ್ದಾರೆ. ಇವರ ವಿರುದ್ಧ ಭೂ ಒತ್ತುವರಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದ್ದು, ಇನ್ನು ತೀರ್ಪು ಬಂದಿಲ್ಲ ಎಂದರು.
ಒತ್ತುವರಿ ವೇಳೆ ಆರು ಜನ ಅಧಿಕಾರಿಗಳಿದ್ದರೂ ಒತ್ತುವರಿ ತೆರವು ಮಾಡಿಸಲು ಆಗಿಲ್ಲ. ಅಧಿಕಾರಿಗಳ ವಿರುದ್ಧ ಕ್ರಮ ಆಗಿಲ್ಲ. ನ್ಯಾಯಾಲಯದಲ್ಲಿ ತಡೆ ತೆರವಾಗಬೇಕು. ಆಗ ಎಲ್ಲ ಸಮಸ್ಯೆ ಪರಿಹಾರವಾಗಲಿದೆ. ಎ.ಜಿ. ಜೊತೆ ಮಾತನಾಡಿ, ತಡೆ ತೆರವಿಗೆ ಕ್ರಮ ವಹಿಸಲಾಗುತ್ತದೆ. ತಡೆ ತೆರವಾದರೆ ನಾವು ಕಾಂಪೌಂಡ್ ಹಾಕುವ ಕೆಲಸ ಮಾಡಬಹುದು. ಈ ಜಾಗ ದೇವಾಲಯಕ್ಕೆ ಉಳಿಯುವಂತೆ ಕ್ರಮ ವಹಿಸಲಾಗುತ್ತದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ದೇವಾಲಯದ ಒತ್ತುವರಿ ವಿಚಾರದಲ್ಲಿ ಲೋಪ ಆಗಿರುವುದು ನಿಜ, 30-35 ವರ್ಷದ ಹಿಂದೆ ಒತ್ತುವರಿಯಾಗಿದೆ. ಆಗಲೇ ಕಾಂಪೌಂಡ್ ಹಾಕಿದ್ದರೆ, ಈ ಸಮಸ್ಯೆ ಇರುತ್ತಿರಲಿಲ್ಲ. ಮುಂದಿನ ಅಧಿವೇಶನದ ಒಳಗಾದರೂ ಸೀನಿಯರ್ ಕೌನ್ಸಿಲ್ ನೇಮಿಸಿ ತಡೆ ತೆರವು ಮಾಡಿ ಕಾಂಪೌಂಡ್ ಹಾಕುವ ಕೆಲಸ ಮಾಡಲಾಗುತ್ತದೆ. ರಾಜ್ಯದಲ್ಲಿ 35 ಸಾವಿರ ದೇವಾಲಯವಿದೆ. ಎಲ್ಲ ಮಾಹಿತಿ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.