ವಿಧಾನಸಭೆ ಪೀಠದ ಬಳಿ ಪೋಟೊ ಶೂಟ್ ಆರೋಪ | ಸ್ಪೀಕರ್ ಉತ್ತರಿಸಲಿ : ಬಿಜೆಪಿ
ಸ್ಪೀಕರ್ ಯು.ಟಿ.ಖಾದರ್
ಬೆಂಗಳೂರು : ಮಂಗಳೂರಿನ ಕಾಂಗ್ರೆಸ್ ನಾಯಕರು ವಿಧಾನಸಭೆ ಸ್ಪೀಕರ್ ಪೀಠದ ಬಳಿ ನಿಂತು ಫೋಟೊಶೂಟ್ ನಡೆಸಿರುವ ಆರೋಪ ಕೇಳಿಬಂದಿದ್ದು, ಇದಕ್ಕೆ ಸ್ಪೀಕರ್ ಯು.ಟಿ.ಖಾದರ್ ಅವರು ಉತ್ತರಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ವಿಧಾನಸಭೆ ಸ್ಪೀಕರ್ ಪೀಠಕ್ಕೆ ಸಂಸದೀಯ ಪದ್ಧತಿಯಲ್ಲಿ ಮಹತ್ವವಿದೆ. ಆದರೆ ಸ್ಪೀಕರ್ ಪೀಠದ ಮುಂದೆ ನಿಂತು ಫೋಟೊಶೂಟ್ ಮಾಡಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ವಿಧಾನಸಭೆಯ ನಿಯಮಾವಳಿಗಳ ಉಲ್ಲಂಘನೆಯಲ್ಲವೇ? ಹಾಗೂ ಸ್ಪೀಕರ್ ಪೀಠದ ಗೌರವದ ನಿಟ್ಟಿನಲ್ಲಿ ಇದು ಸರಿಯಾದ ಕ್ರಮವೇ? ಎಂದು ಬಿಜೆಪಿ ಆಕ್ಷೇಪಿಸಿದೆ.
ಈ ಸಂಬಂಧ ಬುಧವಾರ ಬಿಜೆಪಿ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದು, ಸ್ಪೀಕರ್ ಹುದ್ದೆ ಅತ್ಯಂತ ಪವಿತ್ರ ಹಾಗೂ ಘನತೆ ಇರುವಂತದ್ದು. ಸ್ಪೀಕರ್ ಹುದ್ದೆ ಅಲಂಕರಿಸಿದವರು ರಾಜಕೀಯದಿಂದ ದೂರವಿರಬೇಕೆಂಬ ಅಲಿಖಿತ ನಿಯಮ ಇದೆ. ಆದರೆ ಸ್ಪೀಕರ್ ಹುದ್ದೆ ಅಲಂಕರಿಸಿರುವ ಯು.ಟಿ.ಖಾದರ್ ಅವರು ಸದನದ ನಿಯಮಾವಳಿಗಳನ್ನೆಲ್ಲಾ ಗಾಳಿಗೆ ತೂರಿ ಸ್ಪೀಕರ್ ಪೀಠದ ಬಳಿ ತಮ್ಮ ರಾಜಕೀಯ ಆಪ್ತರ ಜೊತೆ ಪೋಟೊ ಶೂಟ್ ಮಾಡಿಸಿಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಖಾದರ್ ಅವರೇ ತಿಳಿಸಬೇಕು ಎಂದು ಹೇಳಿದೆ.
ಇದೇ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸ್ಪೀಕರ್ ಹಾಗೂ ಹಾಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್ ಪೀಠಕ್ಕೆ ಅದರದ್ದೇ ಆದ ಗೌರವ ಇದೆ. ಪೀಠದ ಪಕ್ಕದಲ್ಲಿ ನಿಂತು ಫೋಟೊ ತೆಗೆಸಿಕೊಳ್ಳುವುದು ಸರಿಯಾದ ಪದ್ಧತಿಯಲ್ಲ. ನಿಯಮಾವಳಿಯ ಪ್ರಕಾರ ನೋಡೋದಾದರೆ ಇದು ಸ್ಪೀಕರ್ ವಿವೇಚನೆಗೆ ಬಿಟ್ಟಿದ್ದು. ಆದರೂ ಪೀಠದ ಗೌರವದ ನಿಟ್ಟಿನಲ್ಲಿ ನೈತಿಕವಾಗಿ ಸರಿಯಾದ ಕ್ರಮ ಅಲ್ಲ ಎಂದರು.