ದುರ್ನಡತೆ ಪ್ರದರ್ಶಿಸುವ ಅಧಿಕಾರಿಗಳ ವಿರುದ್ಧ ಕ್ರಮ : ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ
ಬೆಂಗಳೂರು: ಸರಕಾರಿ ಅಧಿಕಾರಿಗಳು ಕರ್ತವ್ಯ ಲೋಪ ಎಸಗಿದರೆ ಮಾತ್ರವಲ್ಲ, ಸಾರ್ವಜನಿಕರೊಂದಿಗೆ ದುರ್ನಡತೆ ಪ್ರದರ್ಶಿಸಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಎಚ್ಚರಿಕೆ ನೀಡಿದ್ದಾರೆ.
ಗುರುವಾರ ಇಲ್ಲಿನ ಯಲಹಂಕದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಲೋಕಾಯುಕ್ತ ಕಚೇರಿಯಿಂದ ಹಮ್ಮಿಕೊಳ್ಳಲಾಗಿದ್ದ ಯಲಹಂಕ, ಬೆಂಗಳೂರು ಪೂರ್ವ ತಾಲೂಕುಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಕುಂದು-ಕೊರತೆ, ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜನರ ಕುಂದು-ಕೊರತೆಗಳನ್ನು ಬಗೆಹರಿಸುವುದು, ಭ್ರಷ್ಟಚಾರ ನಿರ್ಮೂಲನೆ, ನಿಗ್ರಹ ಮಾಡುವುದು ಲೋಕಾಯುಕ್ತ ಸಂಸ್ಥೆಯ ಕಾರ್ಯೋದ್ದೇಶ. ಸರಕಾರದ ಸವಲತ್ತುಗಳು ಜನರಿಗೆ ತಲುಪುತ್ತಿದೆಯೇ? ಎಲ್ಲಿ ಕೆಲಸ ಆಗುತ್ತಿಲ್ಲ? ಯಾವ ಕೆಲಸ ವಿಳಂಬವಾಗುತ್ತಿದೆ ಎಂಬುದನ್ನು ಪರಿಶೀಲಿಸಿ, ಸಂಬಂಧಿಸಿದ ಅಧಿಕಾರಿಗಳ ಮೂಲಕ ಸೌಲಭ್ಯಗಳನ್ನು ಕಲ್ಪಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದರು,
ಒಂದು ವೇಳೆ ಸೌಕರ್ಯ ನೀಡುವ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಕರ್ತವ್ಯಲೋಪ ಎಸಗಿದರೆ, ದುರ್ನಡತೆ ಪ್ರದರ್ಶಿಸಿದರೆ ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದ ಅವರು, ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ದೂರು ಸಲ್ಲಿಸಿದ ಕೂಡಲೆ ಅಧಿಕಾರಿಗಳ ವಿರುದ್ಧ ಕ್ರಮ ವಹಿಸುವುದಿಲ್ಲ. ಸೂಕ್ತ ವಿಚಾರಣೆಯನ್ನು ನಡೆಸಿ ಆರೋಪಕ್ಕೆ ಪ್ರತಿಕ್ರಿಯೆ ನೀಡಲು ಅಧಿಕಾರಿಗಳಿಗೆ ಸಾಕಷ್ಟು ಅವಕಾಶವನ್ನು ನೀಡಲಾಗುವುದು. ಅಲ್ಲದೆ ದೂರುದಾರರು ಸುಳ್ಳು ಆರೋಪವನ್ನು ಮಾಡಿದಲ್ಲಿ ಅಂತಹ ಪ್ರಕರಣಗಳಲ್ಲಿ ಅವರ ವಿರುದ್ಧ ಕಠಿಣ ಕ್ರಮವನ್ನೂ ಜರುಗಿಸಲಾಗುವುದು ಎಂದು ಉಲ್ಲೇಖಿಸಿದರು.
ಹಲವಾರು ವಲಯಗಳಲ್ಲಿ ಸಾರ್ವಜನಿಕರಿಗೆ ತಮ್ಮ ಹಕ್ಕುಗಳ ಬಗ್ಗೆ ಸಾಕಷ್ಟು ಅರಿವು ಇಲ್ಲದಿರುವ ಕಾರಣ ಇಂತಹ ಕುಂದು ಕೊರತೆ ಅಹವಾಲು ಸ್ವೀಕಾರ ಕಾರ್ಯಕ್ರಮಗಳು ಅವಶ್ಯಕವಾಗಿವೆ. ಇದರ ಸಂಪೂರ್ಣ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು. ಸಭೆಯಲ್ಲಿ ಉಪಲೋಕಾಯುಕ್ತ ಬಿ.ವೀರಪ್ಪ, ಬಿಬಿಎಂಪಿ ಮುಖ್ಯ ಆಯುಕ್ತು ತುಷಾರ್ ಗಿರಿನಾಥ್, ಜಿಲ್ಲಾಧಿಕಾರಿ ಜಿ.ಜಗದೀಶ ಸೇರಿದಂತೆ ಪ್ರಮುಖರಿದ್ದರು.
………………………