ವಿಕ್ರಂಗೌಡ ಪ್ರಕರಣ ತನಿಖೆಗೆ ಆಗ್ರಹ | ‘ಪೊಲೀಸ್ ಎನ್ಕೌಂಟರ್’ ಪದ್ಧತಿ ನಿಲ್ಲಿಸಲಿ : ನೂರ್ ಶ್ರೀಧರ್
ಬೆಂಗಳೂರು : ಮಲೆನಾಡಿನ ಆದಿವಾಸಿ ಹೋರಾಟಗಾರ ವಿಕ್ರಂ ಗೌಡರನ್ನು ನಕಲಿ ಎನ್ಕೌಂಟರ್ ಮೂಲಕ ಕೊಲ್ಲಲಾಗಿದೆ. ಎನ್ಕೌಂಟರ್ ಕುರಿತು ನಿವೃತ್ತ ನ್ಯಾಯಾಧೀಶರೊಬ್ಬರ ಮೇಲುಸ್ತುವಾರಿಯಲ್ಲಿ ತನಿಖೆಗೆ ಆದೇಶಿಸಬೇಕು ಎಂದು ಮಾಜಿ ನಕ್ಸಲ್ ಹಾಗೂ ಕರ್ನಾಟಕ ಜನಶಕ್ತಿಯ ರಾಜ್ಯಾಧ್ಯಕ್ಷ ನೂರ್ ಶ್ರೀಧರ್ ಆಗ್ರಹಿಸಿದ್ದಾರೆ.
ಬುಧವಾರ ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹತ್ತು ವರ್ಷ ಕರ್ನಾಟಕ ಶಾಂತವಾಗಿತ್ತು. ವಿಕ್ರಂಗೌಡ ಮತ್ತು ತಂಡ ಪೊಲೀಸರ ಮೇಲೆ ಯಾವುದೇ ದಾಳಿ ಮಾಡಿರಲಿಲ್ಲ, ಯಾರನ್ನೂ ಕೊಂದಿರಲಿಲ್ಲ, ಬೆದರಿಸಿಯೂ ಇರಲಿಲ್ಲ. ಹಾಗಿದ್ದಾಗ ಪೊಲೀಸರಿಗೆ ಕೊಲ್ಲುವ ಅಗತ್ಯ ತುರ್ತಾದರೂ ಏನಿತ್ತು? ಕಾಡಿನಲ್ಲಿ ಕೆಲವರು ಬಂದೂಕು ಹಿಡಿದು ಓಡಾಡಿದ ಮಾತ್ರಕ್ಕೆ ಅವರನ್ನು ಕೊಂದುಬಿಡಿ ಎಂಬ ಪರವಾನಗಿ ಕೊಟ್ಟವರ್ಯಾರು? ಎಂದು ಪ್ರಶ್ನಿಸಿದರು.
‘ಸಶಸ್ತ್ರ ಹೋರಾಟ ಬಿಟ್ಟು ಮುಖ್ಯವಾಹಿನಿಗೆ ಮರಳಿ’ ಎಂದು ಸರಕಾರದ ಕರೆಗೆ ಓಗೊಟ್ಟು ಹಲವರು 2014-2018ರ ನಡುವೆ ಮುಖ್ಯವಾಹಿನಿಗೆ ಬಂದರು. ಬಂದವರ ಕತೆ ಈಗ ಏನಾಗಿದೆ? ಆದಿವಾಸಿ ಯುವತಿ ಕನ್ಯಾಕುಮಾರಿ 8 ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲೇ ಇದ್ದಾರೆ. ಮತ್ತೊಬ್ಬ ಸಂಗಾತಿ ಪದ್ಮನಾಭರಿಗೆ ಜಾಮೀನು ಸಿಕ್ಕಿದೆ. 8 ವರ್ಷಗಳಿಂದ ಕೋರ್ಟಿಗೆ ಅಲೆಯುವುದೇ ಅವರ ಕೆಲಸವಾಗಿದೆ. ಮಿಕ್ಕವರದೂ ಹೆಚ್ಚು ಕಡಿಮೆ ಇದೇ ಕಥೆ. ಮುಖ್ಯವಾಹಿನಿಗೆ ಬಂದವರನ್ನು ಹೀಗೆ ನಡೆಸಿಕೊಂಡರೆ ಒಳಗಿರುವವರು ಹೇಗೆ ಹೊರಬರಲು ಮನಸ್ಸು ಮಾಡುತ್ತಾರೆ? ನಿಮ್ಮ ಮೇಲೆ ಯಾಕಾದರೂ ವಿಶ್ವಾಸವಿಡಬೇಕು ಎಂದು ಅವರು ಕೇಳಿದರು.
ಸರಕಾರ ತೆಗೆದುಕೊಳ್ಳುತ್ತಿರುವ ಜನವಿರೋಧಿ ನೀತಿಗಳನ್ನೆಲ್ಲಾ ಹೋರಾಟಗಾರರು ತರಾಟೆಗೆ ತೆಗೆದುಕೊಳ್ಳಲೇಬೇಕಿದೆ. ರಾಜ್ಯ ಪೊಲೀಸ್ ಇಲಾಖೆಯಂತೂ ಹೆಚ್ಚಿನ ಪಾಲು ಅಮಿತ್ ಶಾ ಮಾರ್ಗದರ್ಶನದಲ್ಲಿ ನಡೆಯುತ್ತಿದೆ. ಗೃಹ ಮಂತ್ರಿ, ಮುಖ್ಯಮಂತ್ರಿಗಾಗಲಿ ಅದರ ಮೇಲೆ ಹಿಡಿತ ಇಲ್ಲವಾಗಿದೆ. ಈ ವಿಚಾರದಲ್ಲಂತೂ ಬಿಜೆಪಿಗೂ, ಕಾಂಗ್ರೆಸ್ಸಿಗೂ ಹೆಚ್ಚು ವ್ಯತ್ಯಾಸವೇ ಇಲ್ಲದಂತಾಗಿದೆ. ಬಿಜೆಪಿಯನ್ನು ತಡೆಯಲೇಬೇಕಿತ್ತು ತಡೆದಿದ್ದೇವೆ. ಈಗ ಕಾಂಗ್ರೆಸ್ಸನ್ನು ತಿದ್ದಲೇಬೇಕು ಎಂದು ನೂರ್ ಶ್ರೀಧರ್ ಹೇಳಿದರು.
ಮಾಜಿ ನಕ್ಸಲ್ ಹಾಗೂ ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಗೌರವಾಧ್ಯಕ್ಷ ಸಿರಿಮನೆ ನಾಗರಾಜ್ ಮಾತನಾಡಿ, ‘ನಕ್ಸಲ್ ಚಳವಳಿಗೆ ಆಕರ್ಷಿತರಾಗಿ ಸಶಸ್ತ್ರ ದಳಗಳನ್ನು ಸೇರುವಂತಹ ಸ್ಥಿತಿ ನಿರ್ಮಿಸಿದವರು ಯಾರೆನ್ನುವ ಪ್ರಶ್ನೆಯನ್ನು ಸರಕಾರ ಕೇಳಿಕೊಳ್ಳಬೇಕು. ರಾಷ್ಟ್ರೀಯ ಉದ್ಯಾನವನದ ಹೆಸರಿನಲ್ಲಿ ಕಾಡಿನಲ್ಲಿರುವ ಜನರನ್ನೆಲ್ಲಾ ಖಾಲಿ ಮಾಡಿಸಲು ಹೊರಟ ಸರಕಾರದ ನೀತಿಯೇ ಇದಕ್ಕೆ ಮೂಲ ಕಾರಣ. ಈಗ ಒತ್ತುವರಿ ತೆರವು ಹೆಸರಲ್ಲಿ ಮತ್ತೆ ಅರಣ್ಯವಾಸಿಗಳನ್ನು ಕಾಡತೊಡಗಿದ್ದೀರಿ. ಇದು ಹೀಗೆ ಮುಂದುವರೆದರೆ ಇನ್ನೂ ಕೆಲ ಯುವಕ-ಯುವತಿಯರು ಕಾಡಿನ ಪಾಲಾದರೆ ಆಶ್ಚರ್ಯವಿಲ್ಲ. ಅದಕ್ಕೆ ಹೊಣೆ ಸರಕಾರದ ಈ ಹೃದಯಹೀನ, ಬಂಡವಾಳಿಗರ ಪರ, ಜನ ವಿರೋಧಿ ನೀತಿಗಳೇ ಕಾರಣವಾಗಲಿವೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ಜನಶಕ್ತಿ ಗೌರವಾಧ್ಯಕ್ಷ ಪ್ರೊ.ನಗರಿಗೆರೆ ರಮೇಶ್, ದಸಂಸ ಹಿರಿಯ ಮುಖಂಡ ಎನ್.ವೆಂಕಟೇಶ್, ಮಾನವ ಹಕ್ಕುಗಳ ಹೋರಾಟಗಾರ ಪ್ರೊ.ವಿ.ಎಸ್.ಶ್ರೀಧರ್, ಅಖಿಲ ಕರ್ನಾಟಕ ವಿಚಾರವಾದಿಗಳ ವೇದಿಕೆಯ ಸಂಚಾಲಕ ನಾಗೇಶ್ ಅರಳಕುಪ್ಪೆ ಉಪಸ್ಥಿತರಿದ್ದರು.
‘ಸಶಸ್ತ್ರ ಹೋರಾಟದಲ್ಲಿ ಇನ್ನೂ ಯಾರೆಲ್ಲ ನಂಬಿಕೆ ಇಟ್ಟು ತೊಡಿಗಿಸಿಕೊಂಡಿದ್ದಾರೋ ಅವರು ಸರಕಾರದ ಜೊತೆ ಮಾತುಕತೆಗೆ ಬರುವುದಾದರೆ ನಮ್ಮನ್ನು ಸಂಪರ್ಕಿಸಿದರೆ ನಾವು ಮಾನವ ಹಕ್ಕು ಸಂಘಟನೆಗಳ ಮೂಲಕ ಮಾತುಕತೆ ಮುಂದುವರೆಸುವುದಕ್ಕೆ ಸಿದ್ದರಿದ್ದೇವೆ. ರಾಜ್ಯ ಸರಕಾರವೇ ನೇಮಿಸಿದ ಶಾಂತಿ ಸಮಿತಿ ಇದೆ. ಸರಕಾರ ಇದಕ್ಕೆ ಧನಾತ್ಮಕವಾಗಿ ಸ್ಪಂದಿಸಬೇಕು. ರಾಜ್ಯ ಸರಕಾರ ಈ ಹಿಂದೆ ಬಂದ ಕೆಲವರಿಗೆ ಶರಣಾಗತಿ ಆಗುವುದಕ್ಕೆ ಅನುವು ಮಾಡಿಕೊಟ್ಟಂಗೆ, ಈಗಲೂ ಬರುವರಿಗೆ ಅನುವು ಮಾಡಿಕೊಡಬೇಕು’
-ಪ್ರೊ.ವಿ.ಎಸ್.ಶ್ರೀಧರ್, ಮಾನವ ಹಕ್ಕುಗಳ ಹೋರಾಟಗಾರ.