ಬೆಂಗಳೂರು | ಪಿಎಸ್ಸೈ ನೇಮಕಾತಿಗೆ ನಕಲಿ ಅಂಕಪಟ್ಟಿ ಸಲ್ಲಿಕೆ : ಕಾನ್ಸ್ಟೇಬಲ್ ವಿರುದ್ಧ ಎಫ್ಐಆರ್
ಸಾಂದರ್ಭಿಕ ಚಿತ್ರ
ಬೆಂಗಳೂರು : ಪಿಎಸ್ಸೈ ನೇಮಕಾತಿ ಪ್ರಕ್ರಿಯೆ ಸಂದರ್ಭದಲ್ಲಿ ನಕಲಿ ಅಂಕಪಟ್ಟಿ ಸಲ್ಲಿಸಿದ್ದ ಪೊಲೀಸ್ ಕಾನ್ಸ್ಟೇಬಲ್ ವಿರುದ್ಧ ಇಲ್ಲಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪೊಲೀಸ್ ನೇಮಕಾತಿ ವಿಭಾಗದ ಅಧಿಕಾರಿಯೊಬ್ಬರು ನೀಡಿದ ದೂರಿನ ಅನ್ವಯ ಭಾರತೀನಗರ ಠಾಣೆಯ ಕಾನ್ಸ್ಟೇಬಲ್ ಪಿ.ನದಾಫ್ ವಿರುದ್ಧ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿನ ಭಾರತೀನಗರ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪಿ. ನದಾಫ್, ಇತ್ತೀಚೆಗೆ ಕ್ರೀಡಾ ಕೋಟಾದಲ್ಲಿ ಪಿಎಸ್ಸೈ ಆಗಿ ನೇಮಕವಾಗಿದ್ದರು. ನೇಮಕಾತಿ ಪ್ರಕ್ರಿಯೆಗೆ ನದಾಫ್ ಸಲ್ಲಿಸಿದ್ದ ಬಿಎ ಪದವಿಯ ಅಂಕಪಟ್ಟಿ ನೈಜತೆಗೆ ಮೈಸೂರು ವಿವಿಗೆ ಕಳುಹಿಸಲಾಗಿತ್ತು. ಪರಿಶೀಲನೆ ವೇಳೆ ಅಂಕಪಟ್ಟಿ ನಕಲಿ ಎಂಬುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪೊಲೀಸ್ ನೇಮಕಾತಿ ವಿಭಾಗದ ಅಧಿಕಾರಿಗಳು ವಿಧಾನಸೌಧ ಠಾಣೆಗೆ ದೂರು ಸಲ್ಲಿಸಿದ್ದರು.
ಅದರ ಅನ್ವಯ ಎಫ್ಐಆರ್ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.